Advertisement
ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಹುತೇಕ 100 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ. 200 ಮಂದಿ ಶಾಸಕ ಬಲದ ರಾಜಸ್ಥಾನ್ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಶಾಸಕರ ಬೆಂಬಲದ ಅಗತ್ಯವಿದೆ. ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಪೈಲಟ್ ಅವರ ಇಬ್ಬರು ಆಪ್ತ ಸಚಿವರನ್ನು ಕೂಡಾ ಸಂಪುಟದಿಂದ ಕೈಬಿಡಲಾಗಿದೆ. ಆದರೂ ಕಾಂಗ್ರೆಸ್ ಪಕ್ಷ ಪೈಲಟ್ ಹಾಗೂ ಅವರ ಬೆಂಬಲಿಗ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ ಎಂಬುದು ಮುಖ್ಯವಾದ ಅಂಶವಾಗಿದೆ.
Related Articles
Advertisement
ಇದನ್ನೂ ಓದಿ:ಏನಿದು ರಾಜಸ್ಥಾನ್ ಬಿಕ್ಕಟ್ಟು: ಮೂರು ಬೇಡಿಕೆ ಈಡೇರಿಸುವಂತೆ ಸಚಿನ್ ಪೈಲಟ್ ಪಟ್ಟು!
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹತ್ತು ಮಂದಿ ಪಕ್ಷೇತರ ಶಾಸಕರು ಅಥವಾ ಇಬ್ಬರು ಭಾರತೀಯ ಟ್ರೈಬಲ್ ಪಕ್ಷದ ಶಾಸಕರ ಬೆಂಬಲದ ಅಗತ್ಯ ಇರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಪೈಲಟ್ ಹಾಗೂ ಆಪ್ತರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅಸ್ತ್ರ ಉಪಯೋಗಿಸಿ, ಚರ್ಚೆಗೆ ಬಾಗಿಲು ಸದಾ ತೆರೆದಿದೆ ಎಂಬ ಸಂದೇಶವನ್ನು ರವಾನಿಸಿದೆ.
ಈ ಬಗ್ಗೆ ಸ್ಪೀಕರ್ ಅವರು ಪಕ್ಷ ವಿರೋಧಿ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸಬೇಕಾಗುತ್ತದೆ. ಶಾಸಕಾಂಗ ಪಕ್ಷದ ಕಾಯ್ದೆ ಪ್ರಕಾರ, ಶಾಸಕರ ವಿರುದ್ಧ ಅನರ್ಹ ಪ್ರಕ್ರಿಯೆ ಆರಂಭಿಸುವಂತೆ ಸ್ಪೀಕರ್ ಗೆ ದೂರು ನೀಡಬೇಕಾಗುತ್ತದೆ. ನಂತರ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಉತ್ತರಪಡೆಯಬೇಕಾಗುತ್ತದೆ. ನಂತರ ಸ್ಪೀಕರ್ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಅವಕಾಶದಿಂದಾಗಿ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಅಲ್ಪಪ್ರಮಾಣದ ಬಹುಮತದ ವಿಶ್ವಾಸ ಹೊಂದುವಂತೆ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ 107 ಶಾಸಕರ ಬೆಂಬಲ ಇರುವುದಾಗಿ ತಿಳಿಸಿದೆ. ಮಂಗಳವಾರ ಕರೆದ ಶಾಸಕಾಂಗ ಪಕ್ಷದ ಸಭೆಗೆ 106 ಶಾಸಕರು ಹಾಜರಾಗಿದ್ದರು. ತಡರಾತ್ರಿಯ ಬೆಳವಣಿಗೆಯಲ್ಲಿ, ಗೆಹ್ಲೋಟ್ ಸರ್ಕಾರವಾಗಲಿ ಅಥವಾ ಬಿಜೆಪಿಯನ್ನಾಗಲಿ ಬೆಂಬಲಿಸುವುದಿಲ್ಲ ಎಂದು ಭಾರತೀಯ ಟ್ರೈಬಲ್ ಪಕ್ಷ ತಿಳಿಸಿದೆ.
ಇದನ್ನೂ ಓದಿ:ಪೈಲಟ್ ಗೆ ಮತ್ತೊಂದು ಕಂಟಕ: 18 ಮಂದಿ ಬಂಡಾಯ ಶಾಸಕರು, ಪೈಲಟ್ ಗೆ ಸ್ಪೀಕರ್ ನೋಟಿಸ್!
ಕೋರ್ಟ್ ಕಟಕಟೆ ಏರಿದರೆ ಏನಾಗಲಿದೆ?ಒಂದು ವೇಳೆ ಸ್ಪೀಕರ್ ನೋಟಿಸ್ ಅನ್ನು ಬಂಡಾಯ ಶಾಸಕರು ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದೋ ಸ್ಪೀಕರ್ ವಿಚಾರಣೆ ಮೊದಲು ಅಥವಾ ನಂತರ. ಅದು ಬಳಿಕ ಮತ್ತೊಂದು ಕಾನೂನು ಹೋರಾಟದ ತಿರುವು ಪಡೆದುಕೊಳ್ಳಲಿದೆ (ಈಗಾಗಲೇ ಕರ್ನಾಟಕ ರಾಜಕೀಯ ಪ್ರಕರಣದಲ್ಲಿ ಗಮನಿಸಲಾಗಿದೆ). ಒಂದು ವೇಳೆ ಶಾಸಕರ ಅನರ್ಹತೆ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿದರೆ, ಆಗ ಸದನದಲ್ಲಿ ಸಂಖ್ಯಾಬಲವೇ ಮುಖ್ಯವಾಗಲಿದೆ. ಆಗ ಗೆಹ್ಲೋಟ್ ಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಈ ವೇಳೆ ಕಾಂಗ್ರೆಸ್ ಬಂಡಾಯ ಶಾಸಕರು ಬಿಜೆಪಿ ಜತೆ ಹೋಗಬಹುದು. ಇದರಿಂದ ಸದನದಲ್ಲಿ ಬಿಜೆಪಿ ಬಲ (72+19+ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ 03) 94ಕ್ಕೆ ಏರಿಕೆಯಾಗಲಿದೆ. ಗೆಹ್ಲೋಟ್ ಗೆ 88 ಶಾಸಕರ ಬೆಂಬಲ ಇರಲಿದ್ದು, ಆಗ ಗೆಲುವು ಸಾಧಿಸಲು 13 ಪಕ್ಷೇತರ ಹಾಗೂ ಇತರ ಸಣ್ಣ ಪಕ್ಷಗಳ ಶಾಸಕರ ಬೆಂಬಲದ ಅಗತ್ಯವಾಗಲಿದೆ. (ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್, ಎನ್ ಡಿ ಟಿವಿ ಹಾಗೂ ಇತರ ಮೂಲಗಳಿಂದ)