Advertisement

ಸಮೀಕ್ಷೆ ಆಧರಿಸಿ ಕಾಂಗ್ರೆಸ್‌ ರಾಜಕಾರಣ ಮಾಡಲ್ಲ ಐವನ್‌ ಡಿ’ಸೋಜಾ

08:50 AM Sep 10, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂಬ ಕಾಪ್ಸ್‌ ಸಂಸ್ಥೆಯ ಸಮೀಕ್ಷೆ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್‌ ಪಕ್ಷ ಚುನಾವಣಾ ಸಮೀಕ್ಷೆಗಳನ್ನು ನಂಬಿಕೊಂಡು ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಜನರ ಮೇಲೆ ನಂಬಿಕೆ ಇದ್ದು, ಸರಕಾರದ ಸಾಧನೆಯ ಆಧಾರದಲ್ಲಿ ಚುನಾವಣೆ ಎದುರಿಸಲಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಸಿ ಫೋರ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಬಹುಮತಗಳಿಸಲಿದೆ ಎಂದಾಗ, ಅದನ್ನು ಬಿಜೆಪಿಗರು ಸಾರಾಸಗಟು ತಿರಸ್ಕರಿಸಿದ್ದರು. ಈಗ ಕಾಪ್ಸ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನವೂ ಸಿಗುವುದಿಲ್ಲ ಎಂದು ಹೇಳಲಾಗಿದೆ. ಇಷ್ಟಕ್ಕೂ ಸಿ ಫೋರ್‌ ಸಂಸ್ಥೆಯ ಬಗ್ಗೆ ವೆಬ್‌ಸೈಟ್‌ನಲ್ಲಿ ಉಲ್ಲೇಖವಿದೆ. ಆದರೆ ಕಾಪ್ಸ್‌ ಸಂಸ್ಥೆಯ ಬಗ್ಗೆ ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ. ರಾಜ್ಯ ಸರಕಾರದ ಸಾಧನೆಯ ಮುಂದೆ ನಗಣ್ಯವಾದ ಬಿಜೆಪಿಯು ಕಾಪ್ಸ್‌ ಸಂಸ್ಥೆಯ ಮೂಲಕ ಬೇಕಾದಂತೆ ಸಮೀಕ್ಷೆ ನಡೆಸಿದಂತಿದೆ. ಬಿಜೆಪಿಯು ಮೋದಿಯನ್ನು ಮಾತ್ರ ನೆಚ್ಚಿಕೊಂಡಿದೆ. ಆದರೆ ಕೇಂದ್ರ ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗುತ್ತಿದೆ. ಜಿಡಿಪಿಯೂ ಪಾತಾಳಕ್ಕೆ ಕುಸಿದಿದೆ. ರಾಜ್ಯ ಬಿಜೆಪಿಯೂ ಇಬ್ಭಾಗವಾಗಿದ್ದು, ಆಂತರಿಕ ಕಚ್ಚಾಟದಿಂದ ಹೊರಗೆ ಬಂದಿಲ್ಲ. ಹಾಗಿರುವಾಗ ಕರಾವಳಿ ಯಲ್ಲಿ ಎಲ್ಲ 13 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ, ಮಾತ್ರವಲ್ಲ ರಾಜ್ಯದಲ್ಲಿ ಶೇ. 43ರಷ್ಟು ಮತಗ ಳನ್ನು ವೃದ್ಧಿಸಿಕೊಂಡು ಮತ್ತೆ ಅಧಿಕಾರಕ್ಕೆ
ಬರಲಿದೆ ಎಂದು ಐವನ್‌ ಡಿ’ಸೋಜಾ ವಿಶ್ವಾಸ ವ್ಯಕ್ತ ಪಡಿಸಿದರು.

ಬೈಕ್‌ ರ್ಯಾಲಿ ವಿಫಲ
ಬಿಜೆಪಿ ನಡೆಸಿದ ಮಂಗಳೂರು ಚಲೋ ಬೈಕ್‌ ರ್ಯಾಲಿ ಸಂಪೂರ್ಣ ವಿಫಲವಾಗಿದೆ. ಒಂದು ಲಕ್ಷ ಕಾರ್ಯಕರ್ತರನ್ನು ಸೇರಿಸುತ್ತೇವೆ ಎಂದ ಬಿಜೆಪಿಗರಿಗೆ 5,000 ಜನರನ್ನು ಸೇರಿಸಲು ಸಾಧ್ಯವಾಗಿಲ್ಲ. ಇದು ರ್ಯಾಲಿಯ ವೈಫಲ್ಯವನ್ನು ತೋರಿಸುತ್ತದೆ ಎಂದು ಐವನ್‌ ಡಿ’ಸೋಜಾ ತಿಳಿಸಿದರು. ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ರ್ಯಾಲಿ ಹಾಗೂ ಪ್ರತಿಭಟನೆ ನಡೆಸಿದ್ದು, ಇದು ಸರಕಾರದ ವೈಫಲ್ಯವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಐವನ್‌ ಸ್ಪಷ್ಟವಾಗಿ ಉತ್ತರಿಸಲಿಲ್ಲ.
ಮುಖಂಡರಾದ ನಾಗೇಂದ್ರ ಕುಮಾರ್‌, ನಾಗವೇಣಿ, ಸತೀಶ್‌ ಪೆಂಗಲ್‌, ಹಬೀಬ್‌ ಕಣ್ಣೂರು, ಮಹೇಶ್‌ ಕೋಡಿಕಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next