ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರದ ಹಣೆಬರಹ ನಿರ್ಧಾರವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಜತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯೇ ಅಭಿವೃದ್ಧಿ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಗುದ್ದಲಿ ಪೂಜೆ ನಡೆಸಿದ ಉದಾಹರಣೆಯೂ ಇಲ್ಲ ಎಂದು ವ್ಯಂಗ್ಯವಾಡಿದರು.
ಬರ ನಿರ್ವಹಣೆ ವಿಚಾರದಲ್ಲಿ ಸರಕಾರದ ನಡವಳಿಕೆ ಅಕ್ಷಮ್ಯವಾಗಿದೆ. ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರಕಾರದ ಜತೆಗೆ ಸಂಗ್ರಾಮ ನಡೆಸುವಂಥ ಹೊಸ ಪದ್ಧತಿಯನ್ನು ಜಾರಿಗೆ ತಂದಿದ್ದೇ ಈ ಸರಕಾರದ ಸಾಧನೆ. ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ಆದರೆ ಚುನಾಯಿತ ಸರಕಾರದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಹಿತ ಯಾರೂ ನಿಭಾಯಿಸುತ್ತಿಲ್ಲ. ಇದು ತಮ್ಮ ಪರವಾದ ಸರಕಾರ ಎಂದು ರೈತರಿಗೆ ಯಾವತ್ತೂ ಅನಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 690ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರಕಾರ ಕೃಷಿ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ಕೊಡುವುದನ್ನೇ ಮರೆತುಬಿಟ್ಟಿದೆ. ರೈತರ ಬಗೆಗೆ ಸರಕಾರ ಅಸಡ್ಡೆ ಧೋರಣೆ ಹೊಂದಿದೆ. ಹೈನುಗಾರಿಕೆ ನೀಡುತ್ತಿದ್ದ ಪೋ›ತ್ಸಾಹ ಧನವನ್ನು ಕಳೆದ 8-10 ತಿಂಗಳಿನಿಂದ ನೀಡಿಲ್ಲ. ಗ್ಯಾರಂಟಿಗಳ ಅನುಷ್ಠಾನದ ಆತುರದಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ರಾಜ್ಯ ಸರಕಾರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ಆರೋಪಿಸಿದರು.
ಸಿಎಂ ಹಾಗೂ ಸಚಿವರು ಕರ್ನಾಟಕದ ಅಭಿವೃದ್ಧಿ ದೇಶಕ್ಕೇ ಮಾದರಿ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೂಂದು ಕಡೆ ಒಬ್ಬರು ಕಾಂಗ್ರೆಸ್ ನಾಯಕರು ಅಸಾಧ್ಯವಾದುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎನ್ನುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಅಭಿವೃದ್ಧಿ ಆಗಿದೆ ಎಂದು ಬಿಂಬಿ ಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೊಲೆಗಡುಕರಿಗೆ ಪ್ರೇರಣೆ
ರಾಜ್ಯದಲ್ಲಿ ಮೂರ್‍ನಾಲ್ಕು ತಿಂಗಳಲ್ಲಿ 450ಕ್ಕೂ ಹೆಚ್ಚು ಕೊಲೆಗಳು ನಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗಿದೆ. ಲವ್ ಜೆಹಾದ್ ಹಾಗೂ ಎಲ್ಲ ಕೊಲೆ ಪ್ರಕರಣದಲ್ಲೂ ಸರಕಾರ ನೀಡಿದ ಬೇಜವಾಬ್ದಾರಿ ಹೇಳಿಕೆಗಳು ಕೊಲೆಗಡುಕರಿಗೆ ಪ್ರೇರಣೆ ಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.