Advertisement

ವಿಶೇಷ ಅಧಿವೇಶನ ಕರೆಯಲು ಕಾಂಗ್ರೆಸ್‌ ಆಗ್ರಹ

11:17 PM Aug 29, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ತಕ್ಷಣವೇ ವಿಶೇಷ ಅಧಿವೇಶನ ಕರೆಯ ಬೇಕು ಹಾಗೂ ಕೇಂದ್ರದಿಂದ ಹೆಚ್ಚಿನ ಪರಿಹಾರ ಪಡೆಯಲು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ.

Advertisement

ಭೀಕರ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗದಿರುವುದನ್ನು ಖಂಡಿಸಿ, ಕೆಪಿಸಿಸಿ ವತಿಯಿಂದ ಒಂದು ದಿನದ ಪ್ರತಿಭಟನಾ ಧರಣಿ ನಡೆಸಲಾಯಿತು.  ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌ ಹೊರತುಪಡಿಸಿ, ರಾಜ್ಯ ಕಾಂಗ್ರೆಸ್‌ನ ಇತರೆ ನಾಯಕರು ಧರಣಿಯಲ್ಲಿ ಪಾಲ್ಗೊಂಡು, ಪ್ರವಾಹ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಿ ಮೋದಿಯವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಮೂಲಕ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, “ರಾಜ್ಯದಲ್ಲಿ ಪ್ರವಾಹಕ್ಕೆ 22 ಜಿಲ್ಲೆಗಳ 103 ತಾಲೂಕುಗಳ ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಎಲ್ಲವನ್ನೂ ಕಳೆದುಕೊಂಡಿವೆ. ಊರಿಗೆ ಊರೇ ಮುಳುಗಿ ಹೋಗಿವೆ. ಆದರೂ ದೇಶದ ಪ್ರಧಾನಿ ರಾಜ್ಯದ ಪರಿಸ್ಥಿತಿಯ ಕಡೆಗೆ ತಿರುಗಿಯೂ ನೋಡಿಲ್ಲ’ ಎಂದು ಆರೋಪಿಸಿದರು.

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ, ನಾವು ಪ್ರಧಾನಿ ಎದುರು ಮಾತನಾಡುತ್ತೇವೆ. ಜನರ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡ ಲಾಗುತ್ತದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದರೆ, ಬೀದಿ ಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ವಿಫ‌ಲವಾಗಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ರಾಜ್ಯಕ್ಕೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ರಾಜ್ಯದ ಜನರ ನೋವಿಗೆ ಸ್ಪಂದಿಸಲು ಪ್ರಧಾನಿಗೆ ಸಮಯವಿಲ್ಲ ಎಂದು ಟೀಕಿಸಿದರು.

Advertisement

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದ್ದರಿಂದ ಪಂಚಮಿ ಹಬ್ಬ ಮಾಡಲಿಲ್ಲ. ಹಬ್ಬಕ್ಕೆ ಉಂಡಿ ಮಾಡಿದವರೂ ಸಂತ್ರಸ್ತರಿಗೆ ಹಂಚಿದ್ದಾರೆ. ಲಕ್ಷಾಂತರ ಮನೆಗಳು ಬಿದ್ದಿವೆ. ಹಳ್ಳಿಗಳು ಸಂಪೂರ್ಣ ಮುಳುಗಿ ಹೋಗಿವೆ. ರಾಜ್ಯ ಸರ್ಕಾರ ಯಾವುದೇ ಪರಿಹಾರ ಕೆಲಸ ಮಾಡುತ್ತಿಲ್ಲ. ಕೇಂದ್ರದ ಮೂವರು ಸಚಿವರಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಏನು ತೊಂದರೆ?
-ಎಚ್‌.ಕೆ.ಪಾಟೀಲ್‌, ಮಾಜಿ ಸಚಿವ

ಕೇಂದ್ರದ ಗೃಹ ಮತ್ತು ಹಣಕಾಸು ಸಚಿವರು ಬಂದು ಹೋಗಿದ್ದಾರೆ. ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. 26 ದಿನ ಒಬ್ಬರೇ ಸರ್ಕಾರ ನಡೆಸಿ ದಾಖಲೆ ನಿರ್ಮಿಸಿದ್ದೀರಿ, ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ಆಸ್ತಿ ಪಾಸ್ತಿ ಹಾನಿಯಾಗಿದೆ. ಎಲ್ಲದಕ್ಕೂ ಮೊದಲು ಪರಿಹಾರ ಕೊಡಿ.
-ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

ಪ್ರವಾಹದಲ್ಲಿ ನಾಶವಾಗಿರುವ ಬೆಳೆಗೆ ತಕ್ಷಣ ರಾಜ್ಯ ಸರ್ಕಾರ ವಿಮೆ ಕೊಡಿಸಬೇಕು. ಈಗಾಗಲೇ ಕೃಷಿ ಸಾಲ ಪಡೆದಿರುವ ಎಲ್ಲ ರೈತರು ಬೆಳೆ ವಿಮೆ ಕಂತು ತುಂಬಿದ್ದಾರೆ. ರಾಜ್ಯ ಸರ್ಕಾರ ಬೆಳೆ ಹಾನಿಯ ಬಗ್ಗೆ 15 ದಿನದಲ್ಲಿ ಸಮೀಕ್ಷೆ ನಡೆಸಿ, ಮೊದಲು ರೈತರಿಗೆ ಮಧ್ಯಂತರ ಪರಿಹಾರ ಕೊಡಿಸಲಿ.
-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ನೀಡಿದರೆ, ಸಾಲುವುದಿಲ್ಲ. ಕನಿಷ್ಠ 10 ಲಕ್ಷ ರೂ.ಪ್ರತಿ ಕುಟುಂಬಕ್ಕೂ ಪರಿಹಾರ ನೀಡಬೇಕು. ಮನೆ ನಿರ್ಮಾಣ ಮಾಡುವವರೆಗೂ ವ್ಯವಸ್ಥಿತವಾದ ಶೆಡ್‌ ನಿರ್ಮಾಣ ಮಾಡಿ, ಎಲ್ಲ ಸೌಕರ್ಯ ಒದಗಿಸಬೇಕು.
-ಎಂ.ಬಿ.ಪಾಟೀಲ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next