ಬೆಂಗಳೂರು: ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೌಶಲಾಭಿವೃದ್ಧಿ ಕೇಂದ್ರದ ಲ್ಯಾಬ್ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದು, ಸುಮಾರು 34 ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಉನ್ನತ ಶಿಕ್ಷಣ ಸಚಿವರಾದ ಡಾ| ಅಶ್ವತ್ಥ್ ನಾರಾಯಣ್ ಅವರ ಅನುಮತಿ ಮೇರೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ದೂರಿದ್ದಾರೆ.
ರಾಜಾಜಿನಗರ ಕೈಗಾರಿಕಾ ಪ್ರದೇಶದ ಸರಕಾರಿ ಟೂಲ್ ರೂಮ್ ಆ್ಯಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.ರಾಘವೇಂದ್ರ, ಆಡಳಿತ ವ್ಯವಸ್ಥಾಪಕ ಮುನೀರ್ ಅಹ್ಮದ್, ಖರೀದಿ ಅಧಿಕಾರಿಗಳಾದ ರಾಜಕುಮಾರ್ ಅವರು ಅಕ್ರಮ ಟೆಂಡರ್ ಮೂಲಕ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಕಾನೂನು ಮೂಲಕವೇ ಉತ್ತರ: ಡಾ| ಸಿ.ಎನ್.ಅಶ್ವತ್ಥನಾರಾಯಣ:
ಸರಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಎಚ್.ಎಂ.ರೇವಣ್ಣ ಅವರಿಗೆ ಕಾನೂನು ಮೂಲಕವೇ ಉತ್ತರ ನೀಡಲಾಗುವುದು ಎಂದು ಕೌಶಲಾಭಿವೃದ್ಧಿ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೋಪ ಮಾಡಿರುವವರಲ್ಲಿ ಒಬ್ಬರು ಮಾಜಿ ಸಚಿವರು, ಇನ್ನೊಬ್ಬರು ಮಾಜಿ ಸಂಸದರು. ಮಾಜಿ ಸಂಸದರು ವಕೀಲರೂ ಹೌದು. ಆದರೂ ಇಷ್ಟು ಬೇಜವಾಬ್ದಾರಿಯಾಗಿ ಆರೋಪ ಮಾಡಿರುವ ಅವರಿಗೆ ಲೀಗಲ್ ನೋಟಿಸ್ ಕೊಡಲಾಗುವುದು ಎಂದು ತಿಳಿಸಿದರು.