ರಾಮನಗರ/ ಬೆಂಗಳೂರು: ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಕೈ ನಾಯಕರು ಪಾದಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರು ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಮೇಕೆದಾಟು ಪಾದಯಾತ್ರೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ 11 ದಿನಗಳ ಕಾಲ ನಡೆಯಬೇಕಿದ್ದ ಮೇಕೆದಾಟು ಪಾದಯಾತ್ರೆ ಐದೇ ದಿನಕ್ಕೆ ಮೊಟಕುಗೊಂಡಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಕೋವಿಡ್ ಮೂರನೇ ಅಲೆ ಹರಡುತ್ತಿದೆ. ಮೂರನೇ ಅಲೆ ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ. ಬದಲಾಗಿ ಬಿಜೆಪಿಯವರೇ ಕಾರಣ” ಎಂದು ಆರೋಪಿಸಿದರು.
ಕೋರ್ಟ್ ಸೂಚನೆಯ ಬಳಿಕ ಪಾದಯಾತ್ರೆ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕವೂ ಪಾದಯಾತ್ರೆ ಮುಂದುವರಿಸುವುದಾಗಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದರು. ಬಳಿಕ ಎಡಿಜಿಪಿ ಪ್ರತಾಪ್ ರೆಡ್ಡಿ ಮತ್ತು ಎಸ್ ಪಿ ಎಸ್.ಗಿರೀಶ್ ಅವರು ಆಗಮಿಸಿ, “ಸರ್ಕಾರ ಪಾದಯಾತ್ರೆಗೆ ಅವಕಾಶ ನೀಡಿಲ್ಲ. ಹಾಗಾಗಿ ಪಾದಯಾತ್ರೆ ಮೊಟಕುಗೊಳಿಸಿ ಇಲ್ಲವೇ ಕಾನೂನು ಕ್ರಮ ಅನಿವಾರ್ಯ ಎಂದು ಸಿದ್ದರಾಮಯ್ಯಗೆ ಸೂಚನೆ ಕೊಟ್ಟು ತೆರಳಿದ್ದರು.
ಅನುಮತಿ ನೀಡಿಲ್ಲ ಎಂದಾದ ಮೇಲೆ ಅಂತಹ ಪಾದಯಾತ್ರೆ ತಡೆಯಲು ಹಿಂಜರಿಕೆ ಏಕೆ? ಸರ್ಕಾರ ಅಸಹಾಯಕವಾಗಿದೆಯೇ? ಅಥವಾ ಹೈಕೋರ್ಟ್ ಮಧ್ಯಪ್ರವೇಶಿಸಿ ನೆರವಿಗೆ ಬರಬೇಕೆಂದು ಸರ್ಕಾರ ನಿರೀಕ್ಷಿಸುತ್ತಿದೆಯಾ? ಎಂದು ಕೋರ್ಟ್ ಬುಧವಾರ ಛೀಮಾರಿ ಹಾಕಿತ್ತು. ಬಳಿಕ ಬೆನ್ನಲ್ಲೇ ರಾಜ್ಯ ಸರ್ಕಾರ ಯಾತ್ರೆಗೆ ನಿರ್ಬಂಧ ಹೇರಿದೆ. ಈ ಸಂಬಂಧ ಬುಧವಾರ ರಾತ್ರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಪಾದಯಾತ್ರೆಯಲ್ಲಿ ವಾಹನ ಸಂಚಾರ ಹಾಗೂ ಜನರು ಪಾಲ್ಗೊಳ್ಳುವುದನ್ನು ತತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದರು.