Advertisement

Politics: ಅ.9ಕ್ಕೆ ಕಾಂಗ್ರೆಸ್‌ CWC ಸಭೆ-ಜಾತಿ ಗಣತಿ,ಪಂಚರಾಜ್ಯ ಚುನಾವಣೆಯೇ ಪ್ರಮುಖ ಚರ್ಚೆ?

11:30 PM Oct 05, 2023 | Team Udayavani |

ಹೊಸದಿಲ್ಲಿ: ಜಾತಿಗಣತಿ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿರುವ ನಡುವೆಯೇ, ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಸಜ್ಜುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅ.9ರಂದು ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ ಎಂದು ಹೇಳಲಾಗಿದೆ. ಛತ್ತೀಸ್‌ಗಢ, ರಾಜಸ್ಥಾನ ದಲ್ಲಿ ಅಧಿಕಾರ ಉಳಿಸಿಕೊಳ್ಳುವುದರ ಜತೆಗೆ ಮಧ್ಯ ಪ್ರದೇಶದಲ್ಲಿ ಬಿಜೆಪಿಯನ್ನು ಕೆಳಗಿಳಿಸಲು ಹಾಗೂ ತೆಲಂಗಾಣ ಮತ್ತು ಮಿಜೋರಾಂಗಳಲ್ಲೂ ಅಧಿಕಾರ ಸ್ಥಾಪನೆಗೆ ಪಕ್ಷ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕುರಿತಂತೆ ಕಾರ್ಯತಂತ್ರವನ್ನು ಈ ಸಭೆಯಲ್ಲಿ ರೂಪಿಸುವ ಸಾಧ್ಯತೆಗಳಿವೆ. ಬಿಹಾರದ ಜಾತಿಗಣತಿ ವಿಚಾರವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್‌ ಇತರ ಹಿಂದುಳಿದ ವರ್ಗಗಳ ಜನಸಂಖ್ಯಾ ಆಧಾರದ ಮೇಲೆ ದೇಶದಲ್ಲಿ ಹಕ್ಕುಗಳ ಹಂಚಿಕೆಯಾಗಬೇಕೆಂದು ಆಗ್ರಹಿಸಿತ್ತು ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.

Advertisement

ಕಳೆದ ತಿಂಗಳಷ್ಟೇ 2024ರ ಲೋಕಸಭೆ ಚುನಾವಣೆ ವಿಚಾರವಾಗಿ ಹೈದರಾಬಾದ್‌ನಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಇದೀಗ ದಿಲ್ಲಿ ಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next