Advertisement
ಇದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪಕ್ಷದ ರಾಜ್ಯ ಘಟಕಕ್ಕೆ ನೀಡಿರುವ ಸೂಚನೆ. ಇದಕ್ಕೆ ಪೂರಕವಾಗಿ ಅಕ್ಟೋಬರ್ ಅಂತ್ಯದವರೆಗೆ ನಡೆಸಬೇಕಾದ ಹೋರಾಟಗಳ ಕುರಿತು ನೀಲನಕ್ಷೆಯೊಂದನ್ನೂ ಜಾವಡೇಕರ್ ಸಮ್ಮುಖದಲ್ಲಿ ರಾಜ್ಯ ಘಟಕ ಸಿದ್ಧಪಡಿಸಿದೆ.
Related Articles
Advertisement
ನವೆಂಬರ್ 1ರಿಂದ ಎರಡು ತಿಂಗಳ ಕಾಲ ರಾಜ್ಯಾದ್ಯಂತ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ “ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ’ ಎಂಬ ರಥಯಾತ್ರೆ ನಡೆಯಲಿದೆ. ಈ ಯಾತ್ರೆ ಮುಗಿಯುವುದರೊಳಗೆ ಜನರಿಯಿಂದ ಕೈಗೊಳ್ಳಬೇಕಾದ ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಫೆಬ್ರವರಿ ಅಂತ್ಯದೊಳಗೆ ರಾಜ್ಯದಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆ ಸೃಷ್ಟಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಾತಾವರಣ ಸೃಷ್ಟಿಸಬೇಕು. ಮಾರ್ಚ್ 1ರಿಂದ ಚುನಾವಣಾ ಪ್ರಚಾರ ಸಭೆಗಳನ್ನು ಆರಂಭಿಸಲು ವೇದಿಕೆ ಸಿದ್ಧಪಡಿಸಬೇಕು. ಆ ನಿಟ್ಟಿನಲ್ಲಿ ಪಕ್ಷದ ರಾಜ್ಯ ಘಟಕ ಕೆಲಸ ಮಾಡಬೇಕು ಎಂದು ಜಾವಡೇಕರ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷ ಸಂಘಟಿಸುವವರಿಗೆ ಮಾತ್ರ ಟಿಕೆಟ್ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಿ ಗೆಲ್ಲುವ ವಾತಾವರಣ ಸೃಷ್ಟಿಸುವವರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಈಗಾಗಲೇ ತೀರ್ಮಾನಿಸಲಾಗಿದೆ. ಹೀಗಾಗಿ ಪಕ್ಷಕ್ಕೆ ಸೇರುವ ಹೊಸಬರಿಗೆ ಟಿಕೆಟ್ ನೀಡುವ ಖಾತರಿ ಕೊಡಬೇಡಿ. ಅವರನ್ನು ಮೊದಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ನಂತರ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಿ ಎಂದೂ ಸಲಹೆ ಮಾಡಿದರು ಎನ್ನಲಾಗಿದೆ. ಬೂತ್ ಮಟ್ಟದ ವರದಿ ಕೇಳಿದ ಜಾವಡೇಕರ್
ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಅಮಿತ್ ಶಾ ಅವರ ಸೂಚನೆಯ ಮುಂದುವರಿದ ಭಾಗವಾಗಿ ಪ್ರಕಾಶ್ ಜಾವಡೇಕರ್ ಅವರು ತಮ್ಮ ಮುಂದಿನ ಭೇಟಿ ವೇಳೆ ಬೂತ್ ಮಟ್ಟದ ವರದಿ ನೀಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಎಲ್ಲಾ ಬೂತ್‌ಗಳಲ್ಲಿ ಬೂತ್ ಮಟ್ಟದ ಕಮಿಟಿ ರಚಿಸುವುದರ ಜತೆಗೆ ಆ ಸಮಿತಿಗಳು ಪಕ್ಷ ಸಂಘಟನೆ ಮತ್ತು ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳ ಮಾಹಿತಿ ಈ ವರದಿಯಲ್ಲಿರಬೇಕು ಎಂದೂ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಕೊನೇ ಕ್ಷಣದಲ್ಲಿ ಆಗಮಿಸಿದ ಪಿಯೂಷ್ ಗೋಯೆಲ್
ಖಾತೆ ಬದಲಾವಣೆಯಾಗಿದ್ದರಿಂದ ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಸೋಮವಾರದ ಸಭೆಗೆ ಬರುವುದಿಲ್ಲ ಎಂದು ಹೇಳಲಾಗಿತ್ತಾದರೂ ಕೊನೇ ಕ್ಷಣದಲ್ಲಿ ಅವರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು. ಚುನಾವಣಾ ಸಿದ್ಧತೆ ಕುರಿತ ಸಭೆಗೆ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮಾತ್ರ ಬರುತ್ತಾರೆ. ಪಿಯೂಷ್ ಗೋಯೆಲ್ ಅವರು ಆಗಮಿಸುತ್ತಿಲ್ಲ ಎಂಬ ಸಂದೇಶ ಭಾನುವಾರ ರಾತ್ರಿ ರಾಜ್ಯ ಬಿಜೆಪಿ ಕಚೇರಿಗೆ ಬಂದಿತ್ತು. ಆದರೆ, ಚುನಾವಣಾ ಸಹ ಉಸ್ತುವಾರಿಯಾಗಿ ಇದು ಮೊದಲ ಸಭೆಯಾಗಿದ್ದರಿಂದ ಅದರಿಂದ ತಪ್ಪಿಸಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಗೋಯೆಲ್ ಅವರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಬರುವ ನಿರ್ಧಾರ ಪ್ರಕಟಿಸಿದರು ಎನ್ನಲಾಗಿದೆ.
ಅದರಂತೆ ಸಭೆಗಳಿಗೆ ಹಾಜರಾಗಲು ಹೊರಟ ಕೇಂದ್ರ ಸಚಿವ ಅನಂತ್‌ಕುಮಾರ್ ಅವರೊಂದಿಗೆ ಹೊರಟಾಗಲೇ ಅವರು ಬರುತ್ತಿರುವ ಬಗ್ಗೆ ರಾಜ್ಯ ನಾಯಕರಿಗೆ ಮಾಹಿತಿ ಸಿಕ್ಕಿತು. ತಕ್ಷಣ ವಿಮಾನ ನಿಲ್ದಾಣಕ್ಕೆ ತೆರಳಿದ ನಾಯಕರು ಗೋಯೆಲ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು. ನಂತರ ಬಿಜೆಪಿ ಕಚೇರಿಗೆ ಆಗಮಿಸಿದ ಪಿಯೂಷ್ ಗೋಯೆಲ್ ಅವರು ಸ್ವಲ್ಪ ಹೊತ್ತು ಮಾತ್ರ ಸಭೆಯಲ್ಲಿದ್ದು ದೆಹಲಿಗೆ ವಾಪಸಾದರು.