ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಧಿಕಾರ ಭಾಗ್ಯ ಸಂಕ್ರಾಂತಿ ಎಳ್ಳುಬೆಲ್ಲದೊಂದಿಗೆ ದೊರೆಯುವ ಸಾಧ್ಯತೆಗಳಿವೆ.
ಇತ್ತೀಚೆಗಿನ ದಿಲ್ಲಿ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಡೆಸಿದ ಮ್ಯಾರಥಾನ್ ಸಭೆಗಳ ಹಿನ್ನೆಲೆಯಲ್ಲಿ ಇನ್ನೇನು ಪಟ್ಟಿ ಬಿಡುಗಡೆ ಆಗಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗುವ ಮುನ್ನ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಇಡೀ ಚಿತ್ರಣವೇ ಬದಲಾಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಅಧಿಕಾರ ಭಾಗ್ಯ ಕಲ್ಪಿಸುವಂತೆ ರಾಹುಲ್ ಸೂಚಿಸಿದ್ದರಿಂದ ಪಟ್ಟಿಗೆ ಮತ್ತೆ ಗ್ರಹಣ ಹಿಡಿಯಿತು.
ಕಳೆದ ಸಲ ಟಿಕೆಟ್ ವಂಚಿತರು, ಕೆಲವು ಸೋತ ಪ್ರಮುಖರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ವಲಯದಿಂದ ತಮ್ಮನ್ನು ನೇಮಿಸುವಂತೆ ಸಾಕಷ್ಟು ಒತ್ತಡ ಹಾಗೂ ಪ್ರಭಾವ ಹೇರುತ್ತಿದ್ದಾರೆ. ಹೀಗಾಗಿ ಸಿಎಂ- ಡಿಸಿಎಂ ಇಬ್ಬರೂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಇದನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಬೇಕಾಗಿದೆ. ಜತೆಗೆ ಸಿಎಂ ಬಳಿ ಒಂದು ಪಟ್ಟಿ, ಡಿಸಿಎಂ ಬಳಿ ಮತ್ತೂಂದು ಪಟ್ಟಿ ಜತೆಗೆ ಹಲವು ಆಕಾಂಕ್ಷಿಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿ ತಮ್ಮನ್ನು ನೇಮಿಸುವಂತೆ ಸಲ್ಲಿಸಿರುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.
ಚುನಾವಣೆ ಸಂಬಂಧ ಜ. 4ರಂದು ದಿಲ್ಲಿಯಲ್ಲಿ ನಡೆಯುವ ಸಭೆಗೆ ಸಿಎಂ, ಡಿಸಿಎಂ ತೆರಳಲಿದ್ದು, ಆಗ ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ಸುಜೇìವಾಲ ಅವರೊಂದಿಗೆ ನಿಗಮ, ಮಂಡಳಿಗಳ ನೇಮಕದ ಸಂಬಂಧ ಸಭೆ ನಡೆಸಿ, ಬಳಿಕ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ನಿಗಮ, ಮಂಡಳಿಗಳ ಅಧಿಕಾರ ಭಾಗ್ಯ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಶಾಸಕ ರಷ್ಟೇ ಸಂಖ್ಯೆಯ ಕಾರ್ಯ ಕರ್ತರಿಗೂ ಅವಕಾಶ ಕಲ್ಪಿಸ ಲಾಗುವುದು. ಈ ಸಂಬಂಧ ಎಲ್ಲ ನಾಯಕರು ಕುಳಿತು ಚರ್ಚಿಸಿದ್ದೇವೆ. ಪಟ್ಟಿ ಒಂದು ಹಂತಕ್ಕೆ ಬಂದಿದೆ. ಎಲ್ಲರ ಜತೆ ಚರ್ಚಿಸಬೇಕಾಗಿದೆ. ಸಂಕ್ರಾಂತಿ ವೇಳೆಗೆ ನೇಮಕ ಆಗುವ ನಿರೀಕ್ಷೆ ಇದೆ.
-ಡಿ.ಕೆ. ಶಿವಕುಮಾರ್, ಡಿಸಿಎಂ