Advertisement

Congress; ನಿಗಮ ಮಂಡಳಿ ನಾನು ಕೇಳಿಲ್ಲ, ಅವರು ಕೊಟ್ಟಿಲ್ಲ: ಶಾಸಕ ಬೇಳೂರು

05:12 PM Nov 23, 2023 | Vishnudas Patil |

ಸಾಗರ: ನಾನು ನಿಗಮ ಮಂಡಳಿ ಆಕಾಂಕ್ಷಿಯಲ್ಲ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಸಿಎಂ, ಡಿಸಿಎಂ ಅವರ ಬಳಿ ಕೇಳಿಲ್ಲ. ಹಾಗಾಗಿ ನಿರಾಶೆ, ಅಸಮಾಧಾನದ ಮಾತೂ ಇಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.

Advertisement

ಮಿನಿ ವಿಧಾನಸೌಧ ಕಾಮಗಾರಿಯನ್ನು ಗುರುವಾರ ಪರಿಶೀಲನೆ ನಡೆಸಿ ಮಾತನಾಡಿ, ಭದ್ರಾವತಿ ಶಾಸಕ ಸಂಗಮೇಶ್ ಬಿ.ಕೆ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದನ್ನು ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ನನಗೆ ಒಳ್ಳೆಯ ಸ್ಥಾನ ಸಿಗುವ ನಿರೀಕ್ಷೆ ಇದೆ. ಜಾತಿಗಣತಿ ಸಮೀಕ್ಷೆ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದವಾಗಿದ್ದೇನೆ. ನನ್ನ ಅಭಿವೃದ್ಧಿ ವೇಗಕ್ಕೆ ಅಡ್ಡಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನೂತನ ಮಿನಿ ವಿಧಾನ ಸೌಧ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪಿದೆ. ನೂತನ ಮಿನಿ ವಿಧಾನಸೌಧವನ್ನು ಉದ್ಘಾಟಿಸಲು ಲೋಕೋಪಯೋಗಿ ಸಚಿವರನ್ನು ಆಹ್ವಾನಿಸಲಾಗುತ್ತದೆ. ವಿಧಾನಸಭೆ ಅಧಿವೇಶನ ನಂತರ ಲೋಕಾರ್ಪಣೆಗೊಳಿಸಲು ಚಿಂತನೆ ನಡೆಸಲಾಗಿದೆ. ಜನವರಿ ಎರಡನೇ ಭಾಗದಲ್ಲಿ ಉದ್ಘಾಟನೆ ನಡೆಯಬಹುದು ಎಂದರು.

ಈಗಾಗಲೇ 8.50 ಕೋಟಿ ರೂ. ಹಣ ಖರ್ಚಾಗಿದ್ದು, 2.15 ಕೋಟಿ ರೂ. ಹೆಚ್ಚುವರಿಯಾಗಿ ಮಂಜೂರಾಗಿದೆ. ಮೂರನೆ ಅಂತಸ್ತು ಮತ್ತು ಮೇಲ್ಚಾವಣಿ ನಿರ್ಮಾಣಕ್ಕೆ 5.20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೆ ಹಣ ಬಿಡುಗಡೆಯಾಗುತ್ತದೆ. ಸಬ್ ರಿಜಿಸ್ಟ್ರಾರ್ ಕಚೇರಿ ಹೊರತುಪಡಿಸಿ ಎಲ್ಲಾ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಬರುತ್ತದೆ. ಮಿನಿ ವಿಧಾನಸೌಧ ಪಕ್ಕದಲ್ಲಿಯೇ ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ಮಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹಣ ಸಹ ಕಾಯ್ದಿರಿಸಲಾಗಿದೆ. ಶಾಸಕರ ಕಚೇರಿ ಸಹ ಮಿನಿ ವಿಧಾನಸೌಧದಲ್ಲಿಯೆ ಇರುತ್ತದೆ ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇಲ್ಲ. ಸಾಗರ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಹಣವನ್ನು ಮಂಜೂರು ಮಾಡಲು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ನಗರೋತ್ಥಾನ ಯೋಜನೆಯಡಿ ಅನುದಾನ ಬಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದ ಜನರ ನಿರೀಕ್ಷೆಗೆ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಾಳ್, ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಸುರೇಶಬಾಬು, ಬಸವರಾಜ್ ಕುಗ್ವೆ, ನಾಗರಾಜ ಗುಡ್ಡೆಮನೆ, ರಮೇಶ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next