Advertisement

ಕಾಂಗ್ರೆಸ್‌ ಮೇಲ್ಮನೆ ಸದಸ್ಯರ ಸದಸ್ಯತ್ವ ರದ್ಧತಿಗೆ ದೂರು

12:48 PM May 04, 2017 | Harsha Rao |

ಬೆಂಗಳೂರು: ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ.ನಷ್ಟ ಉಂಟು ಮಾಡಿರುವ ಕಾಂಗ್ರೆಸ್‌ನ ಎಂಟು ಮಂದಿ ಮೇಲ್ಮನೆ ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ವಿಧಾನ ಪರಿಷತ್‌ ಸಭಾಪತಿ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಬಿಎಂಪಿ
ಮೇಯರ್‌ ಚುನಾವಣೆಯಲ್ಲಿ ಬೆಂಗಳೂರು ಮತದಾರರೆಂದು ಎಂಟು ಮಂದಿ ವಿಧಾನ ಪರಿಷತ್‌ ಸದಸ್ಯರು ಹಕ್ಕು ಚಲಾವಣೆ ಮಾಡಿದ್ದಾರೆ. ಆದರೆ, ಸಚಿವಾಲಯಕ್ಕೆ ತಮ್ಮ ಸ್ವಂತ ಊರುಗಳ ವಿವರಗಳನ್ನು ನೀಡಿ ಸರ್ಕಾರದಿಂದ ಲಕ್ಷಾಂತರ ರೂ. ಸಾರಿಗೆ ಭತ್ಯೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

Advertisement

ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ್‌, ರಘು ಆಚಾರ್‌, ಬೋಸರಾಜ್‌, ಎಸ್‌.ರವಿ,
ಎಂ.ಡಿ.ಲಕ್ಷ್ಮಿನಾರಾಯಣ್‌, ಜೆಡಿಎಸ್‌ನ ಸಿ.ಆರ್‌. ಮನೋಹರ್‌, ಅಪ್ಪಾಜಿಗೌಡ ಅವರು ತಾವು ತಮ್ಮ ಊರುಗಳಿಂದ ಬೆಂಗಳೂರಿಗೆ ಬರುತ್ತಿರುವುದಾಗಿ ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿ ಸುಮಾರು 32.93 ಲಕ್ಷ ರೂ.ಸಾರಿಗೆ ಭತ್ಯೆ ಪಡೆದುಕೊಂಡಿದ್ದಾರೆ ಎಂದು ದೂರಿದರು.

ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಉದ್ದೇಶಕ್ಕಾಗಿ ಬೆಂಗಳೂರಿಗೆ ವಿಳಾಸ ಬದಲಾಯಿಸಿಕೊಂಡ 8 ವಿಧಾನ
ಪರಿಷತ್‌ ಸದಸ್ಯರು ನಂತರ ತಾವು ತಮ್ಮ ಊರಿನಿಂದ ಬೆಂಗಳೂರಿಗೆ ಬರುತ್ತಿರುವುದಾಗಿ ಸಚಿವಾಲಯಕ್ಕೆ ಮಾಹಿತಿ
ನೀಡಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಹೀಗಾಗಿ ಕೂಡಲೇ ಅವರ ಸದಸ್ಯತ್ವವನ್ನು
ರದ್ದು ಮಾಡಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಈ ಎಂಟು ಮಂದಿ ಸದಸ್ಯರು ಸಚಿವಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದು ಮಾಹಿತಿ ಹಕ್ಕು ದಾಖಲೆಗಳಿಂದ
ಬೆಳಕಿಗೆ ಬಂದಿದ್ದು, ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ವಿಧಾನ ಪರಿಷತ್‌ ಸಭಾಪತಿ ಹಾಗೂ ರಾಜ್ಯಪಾಲರಿಗೆ
ದೂರು ನೀಡಲಾಗುವುದು ಎಂದು ತಿಳಿಸಿದರು. 

ಸರ್ಕಾರಿ ಸಾಧನೆ ಬಿಂಬಿಸಲು 3 ಹಂತದ ಕಾರ್ಯಕ್ರಮ
ಬೆಂಗಳೂರು:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೇ 13ಕ್ಕೆ ನಾಲ್ಕು ವರ್ಷ ಪೂರೈಸಲಿದ್ದು, ಸರ್ಕಾರದ ಸಾಧನೆಗಳನ್ನು ಬಿಂಬಿಸಲು ಮೂರು ಹಂತದಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ನಿರ್ಧರಿಸಿದೆ. ಮೇ 13ರಂದು ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶ ಮಾಡುವ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಸರ್ಕಾರ ಮುಂದಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ನೇತೃತ್ವದಲ್ಲಿ ಅಂದು ಸಮಾವೇಶ ನಡೆಯಲಿದ್ದು, ಬೆಂಗಳೂರು ವಿಭಾಗದ 9 ಜಿಲ್ಲೆಗಳ ಜನರನ್ನು ಸೇರಿಸಿ, ನಾಲ್ಕು ವರ್ಷಗಳ ಸಾಧನೆಯನ್ನು ಜನರ ಮುಂದಿಡಲು
ತೀರ್ಮಾನಿಸಲಾಗಿದೆ.

Advertisement

ಎರಡನೇ ಹಂತದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಸರ್ಕಾರದ ಸಾಧನೆಗಳ ಕುರಿತ “ನುಡಿದಂತೆ ನಡೆದಿದ್ದೇವೆ’ ಪುಸ್ತಕ ಹೊರತರಲು ನಿರ್ಧರಿಸಲಾಗಿದೆ. ಎಲ್ಲಾ ಇಲಾಖೆಗಳ ಸಾಧನೆಗಳ ಸಂಕ್ಷಿಪ್ತ ಮಾಹಿತಿಯುಳ್ಳ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ.

ಅಲ್ಲದೆ, ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ಯಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿಯಂತಹ ಯೋಜನೆಯ ಫ‌ಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಸಂವಾದ ಕಾರ್ಯಕ್ರಮ ಏರ್ಪಡಿಸಲು ವಾರ್ತಾ ಇಲಾಖೆ ನಿರ್ಧರಿಸಿದ್ದು, ಮೇ 18 ರಂದು “ಜನ ಮನ’ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಆನಂತರ ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದಲ್ಲಿ ಬೃಹತ್‌ ಸಮಾವೇಶಗಳನ್ನು ಮಾಡುವ ಮೂಲಕ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

8ರಿಂದ ನಾಲ್ಕು ದಿನ ವೇಣುಗೋಪಾಲ ತಂಡ ಬೆಂಗಳೂರಲ್ಲಿ ಠಿಕಾಣಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ಮೇ 8 ರಿಂದ 11ರವರೆಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಪಕ್ಷದ ವಿವಿಧ ಘಟಕಗಳು, ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡ ನಂತರ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕರ್ನಾಟಕದಲ್ಲಿ 2018ರ ಚುನಾವಣೆಗೆ ಪಕ್ಷವನ್ನು ಸನ್ನದ್ದಗೊಳಿಸುವ ಕುರಿತು ಚರ್ಚೆ ನಡೆಸಿ, ಸಲಹೆ
ಪಡೆದುಕೊಂಡಿದ್ದಾರೆ. 2018ಕ್ಕೆ ಕಾಂಗ್ರೆಸ್‌ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಲೇಬೇಕೆಂಬ
ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಯುವ ನಾಯಕರ ತಂಡ ರಚಿಸಿದ್ದು, ಕರ್ನಾಟಕದ ಉಸ್ತುವಾರಿಯನ್ನು ವೇಣುಗೋಪಾಲಗೆ ವಹಿಸಿದ್ದಾರೆ. ವೇಣುಗೋಪಾಲ ಹಾಗೂ ನಾಲ್ವರು ಕಾರ್ಯದರ್ಶಿಗಳು ಮೇ 8 ರಂದು ಕೆಪಿಸಿಸಿ
ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಮೇ 9ರಂದು ಜಿಲ್ಲಾಧ್ಯಕ್ಷರ ಜೊತೆ ಸಭೆ ನಡೆಸಲಿದ್ದು, ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿ ಹಾಗೂ ಮುಂದಿನ ಚುನಾವಣೆಗೆ ಕೈಗೊಳ್ಳಬೇಕಾದ ಪೂರ್ವ ಸಿದ್ದತೆಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಮೇ 10 ರಂದು ಪಕ್ಷದ ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬೆಳವಣಿಗೆ ಮತ್ತು ಮುಂದಿನ ಚುನಾವಣೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಮೇ
11 ರಂದು ಸಮನ್ವಯ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next