ರಬಕವಿ-ಬನಹಟ್ಟಿ: ರಾಜಕಾರಣದಲ್ಲಿ ಗಂಭೀರತೆ ಬರುವವರೆಗೆ ಕಾಂಗ್ರೆಸ್ ಪಕ್ಷ ಸದೃಢವಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಮೂಲಭೂತವಾಗಿ ಗಂಭೀರತೆಯಿಂದ ಪಕ್ಷದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸಬೇಕು ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಶನಿವಾರ ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಬಿಎಲ್‌ಓ-2 ಮತದಾರರ ಪಟ್ಟಿ ಪರಿಷ್ಕರಣಾ ತರಬೇತಿ ಶಿಬಿರದಲ್ಲಿ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಜನರ ಬದುಕನ್ನು ನಿಸ್ತೇಜನ ಮಾಡುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ವಿದ್ಯಾವಂತರ ಪರಿಸ್ಥಿತಿ ಕೆಟ್ಟದಾಗಿದೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ವಾಧಿಕಾರಿ ಸರ್ಕಾರ ನಡೆಸುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ನಿರ್ಣಾಮವಾಗುತ್ತಿದೆ. ಬಿಜೆಪಿ ಪಕ್ಷ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಹೆಸರುಗಳನ್ನು ತೆಗೆದು ಹಾಕಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಎಲ್‌ಓಗಳ ಜವಾಬ್ದಾರಿಗಳು ಮುಖ್ಯವಾಗಿವೆ ಎಂದು ಉಮಾಶ್ರೀ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ, ೨೦೨೩ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಎಲ್‌ಓ-2 ಕಾರ್ಯಕರ್ತರ ಜವಾಬ್ದಾರಿಗಳು ಅತಿ ಮುಖ್ಯವಾಗಿವೆ. ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಡೆಯಬೇಕಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರ್ಕಾರಕ್ಕೆ ಸಮಾಂತರವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಮಹತ್ವದ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಆಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಎಲ್‌ಓಗಳಿಗೆ ಸಮಾನಂತರವಾಗಿ ಬಿಎಲ್‌ಓ ಗಳು ಕರ್ತವ್ಯ ನಿರ್ವಹಿಸುತ್ತಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಕಾರ್ಯ ನಿರ್ವಹಿಸುತ್ತಿರುವುದು ಪಕ್ಷಕ್ಕೆ ಮಾತ್ರ ಅಲ್ಲ ದೇಶಕ್ಕೆ ಸಲ್ಲಿಸುವ ಬಹು ದೊಡ್ಡ ಸೇವೆಯಾಗಿದೆ ಎಂದು ದಯಾನಂದ ಪಾಟೀಲ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ತೇರದಾಳ ಮತಕ್ಷೇತ್ರದ ಉಸ್ತುವಾರಿ ಬಸವರಾಜ ಶಿಗ್ಗಾಂವಿ ಮಾತನಾಡಿದರು. ವೇದಿಕೆಯ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನಜೀರ್ ಕಂಗನೊಳ್ಳಿ, ಆನಂದ ಸಿಂಪಿ, ಮಲ್ಲಪ್ಪ ಸಿಂಗಾಡಿ ಇದ್ದರು.
ಲಕ್ಷ್ಮಣ ದೇಸಾರಟ್ಟಿ ಸ್ವಾಗತಿಸಿದರು. ಮಾರುತಿ ಸೋರಗಾವಿ ನಿರೂಪಿಸಿದರು. ಕಿರಣ ಕರಲಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತ್ಯಪ್ಪ ಮಗದುಮ್, ಜಿನ್ನಪ್ಪ ಹೊಸೂರ, ವಿದ್ಯಾ ಬಿಳ್ಳೂರ, ಶಾಂತವೀರ ಬೀಳಗಿ, ರಮೇಶ ಸವದಿ, ಶ್ರೀಶೈಲ ಮೇಣಿ, ಪ್ರವೀಣ ಪೂಜಾರಿ, ಬಸವರಾಜ ದ್ಯಾವನ್ನವರ, ರಾಹುಲ ಕಲಾಲ, ಅಶೋಕ ಅಳಗೊಂಡ ಸೇರಿದಂತೆ ತೇರದಾಳ ಮತಕ್ಷೇತ್ರದ ಕಾರ್ಯಕರ್ತರು ಮತ್ತು ಬಿಎಲ್‌ಓ ಗಳು ಇದ್ದರು.