ದಾವಣಗೆರೆ: ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಹಿಂದಿನ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿಯೂ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದ್ದು, ಶೇ. 100ರಷ್ಟು ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ಗೆಲ್ಲುತ್ತಾರೆ ಎಂದರು.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಪಟ್ಟಂತೆ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಚಿತ್ರದುರ್ಗ ಕ್ಷೇತ್ರದ ಪಕ್ಷದ ಅಭ್ಯರ್ಥಿ ಬಿ. ಸೋಮಶೇಖರ್ ಅವರು ವಿದ್ಯಾರ್ಥಿ, ಯುವ ಕಾಂಗ್ರೆಸ್, ಕೆಪಿಸಿಸಿ ಸದಸ್ಯರಾದವರು. ಗ್ರಾಮ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿದ್ದಂತಹವರು ಎಂದು ತಿಳಿಸಿದರು.
ದಾವಣಗೆರೆಯಲ್ಲಿ 679, ಹರಿಹರದಲ್ಲಿ 387, ಜಗಳೂರಿನಲ್ಲಿ 419 ಒಳಗೊಂಡಂತೆ ಚಿತ್ರದುರ್ಗ ಕ್ಷೇತ್ರದಲ್ಲಿ 4510 ಮತದಾರರು ಇದ್ದಾರೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿ ಮತದಾರರನ್ನು ಭೇಟಿ ಮಾಡಲಾಗಿದೆ. ಎಲ್ಲ ಕಡೆಯಲ್ಲೂ ಉತ್ತಮ ಬೆಂಬಲ ದೊರಕಿದೆ. ಹಾಗಾಗಿ ನಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂದು ಹೇಳಿದರು.
ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ವಿಧಿಗೆ ತಿದ್ದುಪಡಿ, ಮೀಸಲಾತಿ ನೀಡಿ ಮಹಿಳೆಯರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರಿಗೂ ಅಧಿಕಾರ ನಡೆಸುವ ಅವಕಾಶ ಮಾಡಿಕೊಟ್ಟರು. ನರೇಗಾ ಯೋಜನೆ ಜಾರಿಗೆ ತಂದಿರುವುದು ಕಾಂಗ್ರೆಸ್. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಅಧಿಕಾರ ವಿಕೇಂದ್ರೀಕರಣ, ಮೀಸಲಾತಿ, ನರೇಗಾ ಯೋಜನೆ ಜಾರಿಗೆ ತಂದಿರುವ ಕಾಂಗ್ರೆಸ್ ಬಗ್ಗೆ ಮತದಾರರಲ್ಲಿ ಒಳ್ಳೆಯ ಭಾವನೆ ಇದೆ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಜಬ್ಟಾರ್, ಪಿ. ರಾಜ್‌ಕುಮಾರ್, ಎಂ.ಟಿ.ಸುಭಾಶ್ಚಂದ್ರ, ಎಚ್. ಲಿಂಗಣ್ಣ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.