Advertisement

ಪಂಚಾಯತ್‌ ಶಿಫಾರಸು ಮಾಡಿದ್ರೆ ಶಿರ್ವ ಪಟ್ಟಣ ಪಂಚಾಯತ್‌: ಸೊರಕೆ

03:50 PM May 01, 2023 | Team Udayavani |

ಶಿರ್ವ: ಕಾಪು ಕ್ಷೇತ್ರಕ್ಕೆ ಶಿರ್ವ ಕೇಂದ್ರ ಸ್ಥಳವಾಗಿದ್ದು, ಪಟ್ಟಣ ಪಂಚಾಯತ್‌ ಮಾಡುವಷ್ಟು ಎಲ್ಲಾ ಅರ್ಹತೆ,ಅವಕಾಶವನ್ನು ಹೊಂದಿದೆ. ಪಂಚಾಯತ್‌ ಶಿಫಾರಸು ಮಾಡಿದರೆ ಶಿರ್ವಕ್ಕೆ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಟ್ಟಣ ಪಂಚಾಯತ್‌ ಆಗಿ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಅವರು ಮೇ. 1 ರಂದು ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯ ಬಳಿಯ ಮಹಿಳಾ ಸೌಧದಲ್ಲಿ ನಡೆದ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜನಸಂಪರ್ಕ ಸಭೆ,ಪಂಚಾಯತ್‌ ಭೇಟಿ ಮಾಡುವುದು ಶಾಸಕರ ಜವಾಬ್ದಾರಿಯಾಗಿದ್ದು, ತಾನು ಶಾಸಕನಾಗಿದ್ದಾಗ ಪ್ರತೀ 3 ತಿಂಗಳಿಗೊಮ್ಮೆ ಪಂಚಾಯತ್‌ಗೆ ಭೇಟಿ ನೀಡಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡ್ತಾ ಇದ್ದೆ. ಕಳೆದ 5 ವರ್ಷಗಳಲ್ಲಿ ಅವೆಲ್ಲವೂ ನಿಂತು ಹೋಗಿದ್ದು,ಕಾಮಗಾರಿಗಳಲ್ಲಿ ಕಮಿಷನ್‌ ಹೊಡಿಯೋ ಕೆಲಸ ನಡೆಯುತ್ತಿದೆ.ತಾಲೂಕು ಕಚೇರಿಗಳಲ್ಲಿ ಬ್ರೋಕರ್‌ಗಳೇ ತುಂಬಿಹೋಗಿ ಜನರ ಕೆಲಸ ಆಗ್ತಾ ಇಲ್ಲ. ಎಲ್ಲದಕ್ಕೂ ಕಡಿವಾಣ ಹಾಕುವ ಕೆಲಸ ಆಗಬೇಕಿದ್ದು, ಜನರ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.

ಮನೆಗೊಂದು ಉದ್ಯೋಗ:

ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ ವರ್ಗದ ಶ್ರಮ ಬಹಳಷ್ಟು ಇದ್ದು ಕಾರ್ಮಿಕರನ್ನು ತುಳಿಯೋ ಕೆಲಸ ಆಡಳಿತಾರೂಢ ಸರಕಾರ ಮಾಡುತ್ತಿದೆ. ಕಾಪು ಕ್ಷೇತ್ರ ಪ್ರಾಕೃತಿಕ ಸಂಪನ್ಮೂಲದೊಂದಿಗೆ ವಿಭಿನ್ನ ಸಮುದಾಯವನ್ನು ಹೊಂದಿದ ಊರಾಗಿದ್ದು, ಕುಡಿಯುವ ನೀರಿನ ಸಮಸ್ಯೆ,ಮನೆ ನಿವೇಶನದ ಅರ್ಜಿ ಬಾಕಿ ಇದೆ. ಪಾದೂರಿನಲ್ಲಿ ಕಚ್ಚಾತೈಲ ಘಟಕದ ಸಂತ್ರಸ್ತರಿಗೆ ದೇಶದಲ್ಲಿ ಎಲ್ಲೂ ಸಿಗದ ಪರಿಹಾರವನ್ನು ಕೊಡಿಸುವ ಕೆಲಸ ಮಾಡಲಾಗಿದೆ. ಕೈಗಾರಿಕೆಗಳಲ್ಲಿ ಊರಿನ ಜನರಿಗೆ ಕೆಲಸ ಕೊಡುವ ಕಾರ್ಯ ಆಗಬೇಕಿದ್ದು, ಮನೆಗೊಂದು ಉದ್ಯೋಗ ನೀಡುವ ಬಂಪರ್‌ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮಾತನಾಡಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ, ಜನಸಾಮಾನ್ಯರಿಗೆ ಸಹಾಯವಾಗುತ್ತದೆ. ಸೊರಕೆಯವರು ಪ್ರತೀ ಪಂಚಾಯತ್‌ ಮಟ್ಟಕ್ಕೆ ಬಂದು ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಶಿರ್ವ ಗ್ರಾಮದಲ್ಲಿ ಕಾಂಗ್ರೆಸ್‌ನ ಒಂದು ಓಟು ಕೂಡಾ ಮಿಸ್‌ ಆಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ನವೀನ್‌ ಡಿಸೋಜಾ, ರತನ್‌ ಶೆಟ್ಟಿ,ನವೀನ್‌ಚಂದ್ರ ಶೆಟ್ಟಿ,ದಿನೇಶ್‌ ಕೋಟ್ಯಾನ್‌,ಜಿತೇಂದ್ರ ಫುರ್ಟಾಡೋ, ಪ್ರಕಾಶ್‌, ಗೀತಾ ವಾಗ್ಲೆ,ಪ್ರಭಾ ಶೆಟ್ಟಿ, ಪ್ರಶಾಂತ್‌ ಜತ್ತನ್‌,ವಿಲ್ಸನ್‌ ರೊಡ್ರಿಗಸ್‌,ಪಕ್ಷದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next