ಕಾರ್ಕಳ: ಕಳೆದ ಭಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಬಯಸಿ ಸಿಗದೇ ವಂಚಿತರಾದಗ ಜೀವಂತವಿದ್ದ ಗೋಪಾಲ ಭಂಡಾರಿಯವರ ಶವಯಾತ್ರೆಯನ್ನು ಸಾರ್ವಜನಿಕವಾಗಿ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಗೆ ಈಗ 4 ವರ್ಷದ ಬಳಿಕ ಭಂಡಾರಿಯವರ ನೆನಪಾಗಿದೆ. ಪುತ್ಥಳಿಕೆ ನಿರ್ಮಿಸುವುದಕ್ಕೆ ಅವರಿಗೆ ಜ್ಞಾನೋದಯವಾಗಿದೆ. ಮೊದಲು ತಾವು ತಮ್ಮ ಬದ್ಧತೆ ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಸವಾಲು ಹಾಕಿದ್ದಾರೆ.
ಹೆಬ್ರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಟಿಕೆಟ್ ಸಿಗದಿದ್ದಾಗ ಜೀವಂತವಿದ್ದ ವ್ಯಕ್ತಿಯ ಶವಯಾತ್ರೆ ನಡೆಸಿ ಸುಟ್ಟರು. ಊರೆಲ್ಲ ಸಂಭ್ರಮಿಸಿದರು. ಅಂದು ಕಣ್ಣೀರು ಹಾಕುವಂತೆ ಮಾಡಿ ಮಾನವೀಯತೆ ಮರೆತು ಅಮಾನವೀಯವಾಗಿ ನಡೆಸಿಕೊಂಡವರು ಇಂದು ಅವರ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.
ಅಂದು ಗೌರವ ಕೊಡದವರು ಈಗ ಪುತ್ಥಳಿಕೆ ನಿರ್ಮಾಣದಂತಹ ಭರವಸೆ ನೀಡುವ ನಾಟಕವಾಡುತ್ತಿದ್ದಾರೆ. ಅಂದಿನ ಆ ಘೋರ ಕಹಿ ಘಟನೆ ಶವಯಾತ್ರೆ ನಡೆಸಿದ ನೀವು ಮರೆತರೂ ಕ್ಷೇತ್ರದ ಜನತೆ ಮರೆತಿಲ್ಲ ಎಂದಿರುವ ಅವರು ಟಿಕೆಟ್ ಸಿಗದೆ ಇದ್ದಾಗ ಕೀಳು ಮಟ್ಟಕ್ಕೆ ಇಳಿದ ತಾವು 4 ವರ್ಷ ಬಿಜೆಪಿ ಜತೆ ಸಖ್ಯ ಬೆಳೆಸಿಕೊಂಡಿದ್ದಿರಿ. ತಾವೊಬ್ಬ ಅವಕಾಶವಾದಿ ರಾಜಕಾರಣಿಯಾಗಲು ಬಯಸುತ್ತಿದ್ದೀರಿ. ಟಿಕೆಟ್ ಸಿಕ್ಕಾಗ ಒಂದು ಪಕ್ಷ, ಒಂದು ನೀತಿ ಸಿಗದೇ ಇದ್ದಾಗ ಇನ್ನೊಂದು ಕಡೆ ವಾಲುವ ನೀವು ನಿಜವಾಗಿಯೂ ಯಾವುದರಲ್ಲಿ ಇದ್ದಿರಿ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ, ನಿಮ್ಮ ನಿಜವಾದ ಬದ್ಧತೆ ಏನೆಂಬುದನ್ನು ಬಹಿರಂಗಪಡಿಸಿ ಎಂದರು.
ಜನಪ್ರತಿನಿಧಿಗೆ ಹೇಗೆ ಗೌರವ ಕೊಡಬೇಕೆಂಬುದು ಬಿಜೆಪಿಗೆ ತಿಳಿದಿದೆ. ಕಾರ್ಕಳ ಉತ್ಸವ ಸಂದರ್ಭ ಉತ್ಸವದ ಪ್ರಧಾನ ವೇದಿಕೆಗೆ ಭಂಡಾರಿಯವರ ಹೆಸರಿಟ್ಟು ದೊಡ್ಡ ಮಟ್ಟದ ಗೌರವ ಸಲ್ಲಿಸಿದ್ದೇವೆ. ಅವರಿಗೆ ಸಲ್ಲಿಸಿದ ಗೌರವದ ಬಗ್ಗೆ ಇಡೀ ನಾಡು ಕೊಂಡಾಡಿದೆ. ಅವರಿಗೆ ಸಲ್ಲಬೇಕಾದ ಎಲ್ಲ ಗೌರವವನ್ನು ಬಿಜೆಪಿ ಸಲ್ಲಿಸುತ್ತ ಬಂದಿದೆ. ಮುಂದೆಯೂ ನೀಡುತ್ತದೆ.
ಆದರೆ ಕಾಂಗ್ರೆಸ್ ಅಭ್ಯರ್ಥಿಯಾದ ತಾವು ಚುನಾವಣೆ ಹೊತ್ತಲ್ಲಿ ಪುತ್ಥಳಿಕೆ ಇನ್ನಿತರ ವಿಚಾರ ಮುಂದಿಟ್ಟುಕೊಂಡು ಜನರ ಮುಂದೆ ಭಾವನಾತ್ಮಕವಾಗಿ ವರ್ತಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಮಣಿರಾಜ್ ಶೆಟ್ಟಿ, ಮಹಾವೀರ ಹೆಗ್ಡೆ, ಮುಟ್ಲುಪ್ಪಾಡಿ ಸತೀಶ್ ಶೆಟ್ಟಿ, ಸತೀಶ್ ಪೈ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.