Advertisement

ಕಾಂಗ್ರೆಸ್‌ನಿಂದ ಸುಳ್ಯದ ಸರ್ವಾಂಗೀಣ ಅಭಿವೃದ್ಧಿ: ಯು.ಬಿ. ವೆಂಕಟೇಶ್‌

01:12 PM Apr 20, 2018 | |

ಸುಳ್ಯ : ನುಡಿದಂತೆ ನಡೆದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಮಗದೊಮ್ಮೆ ಆಡಳಿತಕ್ಕೆ ಬರುವುದು ನಿಶ್ಚಿತ. ಹಾಗಾಗಿ ಸುಳ್ಯದಲ್ಲಿ ಡಾ| ರಘು ಅವರನ್ನು ಗೆಲ್ಲಿಸಿದಲ್ಲಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾಣಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್‌ ಹೇಳಿದರು.

Advertisement

ಗುರುವಾರ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪ್ರಯುಕ್ತ ಪುರಭವನದಲ್ಲಿ ನಡೆದ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಂದಿನ 20 ದಿವಸ ಕಾರ್ಯಕರ್ತರು ಬಿಡುವಿಲ್ಲದೆ ಕೆಲಸ ಮಾಡಬೇಕು. ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಶಾಸಕರ ವೈಫಲ್ಯದಿಂದ 25 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿಲ್ಲ. ಗ್ರಾಮ-ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿರುವುದು ಅದಕ್ಕೆ ಸಾಕ್ಷಿ ಎಂದ ಅವರು, ಈ ಬಾರಿ ಡಾ| ರಘು ಅವರನ್ನು ಕ್ಷೇತ್ರದ ಪ್ರಜ್ಞಾವಂತ ಮತದಾರರು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಅಭ್ಯರ್ಥಿ ಡಾ| ರಘು ಮಾತನಾಡಿ, ಜನಸೇವೆಗಾಗಿ ಸರಕಾರಿ ಉದ್ಯೋಗ ತೊರೆದು ರಾಜಕೀಯಕ್ಕೆ ಬಂದಿದ್ದೇನೆ. ಹಾಗಾಗಿ ನನಗೊಂದು ಅವಕಾಶ ಕೊಡಿ. ಮುಂದಿನ 5 ವರ್ಷ ನಿಮ್ಮ ಸೇವೆ ಮಾಡುತ್ತೇನೆ ಎಂದರು.

ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್‌, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಕಾರ್ಯದರ್ಶಿ ಭರತ್‌ ಮುಂಡೋಡಿ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್‌, ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಕಣಚೂರು ಮೋನು, ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ ಮಾತನಾಡಿದರು.

Advertisement

ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಅಧ್ಯಕ್ಷ ಮುರಳೀಧರ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಮಾಜಿ ಶಾಸಕ ಕೆ. ಕುಶಲ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗಿಸ್‌, ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಅಬ್ದುಲ್‌ ಗಫೂರ್‌, ಅಶೋಕ್‌ ನೆಕ್ರಾಜೆ, ಉಷಾ ಅಂಚನ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವಿಜಯ ಕುಮಾರ್‌ ರೈ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಫಜ್ಲಲ್‌ ರಹಿಂ, ಮಹೇಶ್‌ ರೈ ಅಂಕೋತ್ತಿಮಾರ್‌, ಶಕೂರ್‌ ಹಾಜಿ, ಕಡಬ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಡೇನಿಸ್‌ ಫೆರ್ನಾಂಡಿಸ್‌, ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಾಮತ್‌, ಬ್ಲಾಕ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಭಟ್‌, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್‌, ಅಬ್ದುಲ್‌ ಕುಂಞಿ ಗೂನಡ್ಕ, ಯುವ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಿಕ್‌ ಕೊಕ್ಕೊ, ನ್ಯಾಯವಾದಿ ಕುಂಞಪಳ್ಳಿ ಮತ್ತಿತರರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಪ್ರಕಾಶ್‌ ರೈ ಸ್ವಾಗತಿಸಿ, ಧರ್ಮಪಾಲ ಕೊಯಿಂಗಾಜೆ ನಿರೂಪಿಸಿದರು.

ಪಕ್ಷಕ್ಕೆ ಸೇರ್ಪಡೆ
ಶಾಸಕ ಎಸ್‌. ಅಂಗಾರ ಅವರ ಮಾಜಿ ಆಪ್ತ ಸಹಾಯಕ ಕೊರಗಪ್ಪ ಕೊಯಿಲ, ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮುನ್ನಿ ದೊಡ್ಡೇರಿ, ಅಜ್ಜಾವರ ಬಿಜೆಪಿ ವಾರ್ಡ್‌ ಸಮಿತಿ ಅಧ್ಯಕ್ಷ ಮಿಥುನ್‌ ಕರ್ಲಪ್ಪಾಡಿ, ಕೊಡಿಯಾಲದ ಬಿಜೆಪಿ ಕಾರ್ಯಕರ್ತ ದಾಮೋದರ ಹಾಗೂ ಜಯಪ್ರಕಾಶ್‌ ಪರಿಯಂಬಿ ನೇತೃತ್ವದಲ್ಲಿ ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಕಲ್ಮಕಾರು ಐನೆಕಿದು ಪ್ರದೇಶದ 50ಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಅದ್ದೂರಿ ಮೆರವಣಿಗೆ
ನಗರದ ಚುನಾವಣ ಪ್ರಚಾರ ಸಮಿತಿ ಕಚೇರಿ ಬಳಿಯಿಂದ ರಥಬೀದಿ ರಸ್ತೆ ಮೂಲಕ ಪುರಭವನಕ್ಕೆ ಮೆರವಣಿಗೆ ನಡೆಯಿತು. ಕೇರಳ ಚೆಂಡೆ ವಾದನದೊಂದಿಗೆ ಪಕ್ಷದ ಧ್ವಜ ಹಿಡಿದು, ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಅನಂತರ ಸಮಾವೇಶ ನಡೆಯಿತು.

ಧಾರ್ಮಿಕ ಕೇಂದ್ರಕ್ಕೆ ಭೇಟಿ
ಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಬೆಳಗ್ಗೆ ಡಾ| ರಘು, ಪಕ್ಷದ ಮುಖಂಡರು ನಗರದ ಚೆನ್ನಕೇಶವ ದೇವಾಲಯ, ಶ್ರೀರಾಮ ಮಂದಿರ, ಕಲ್ಕುಡ ದೈವಸ್ಥಾನ, ಸೆಂಟ್‌ ಬ್ರಿಜಿತ್‌ ಚರ್ಚ್‌, ಮೊಗರ್ಪಣೆ ಮಸೀದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುಮಾರು 11.30 ಕ್ಕೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಮಂಜುನಾಥ ಅವರಿಗೆ ನಾಮಪತ್ರ ಸಲ್ಲಿಸಿದರು.

ಜೋಶ್‌ ನೂರು ಪಟ್ಟು 
ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ, ಈ ಹಿಂದೆ ಜೋಶ್‌ ಕಡಿಮೆ ಇದೆ ಎಂದಿದ್ದೆ. ಆದರೆ ಇವತ್ತು ಕಾರ್ಯಕರ್ತರ ಪಡೆ, ಬಿಜೆಪಿಯಿಂದ ಪಕ್ಷ ಸೇರುತ್ತಿರುವವರ ದಂಡು ಕಂಡಾಗ, ಜೋಶ್‌ ನೂರುಪಟ್ಟು ಇಮ್ಮಡಿಯಾಗಿದೆ ಅನ್ನುವುದು ಸತ್ಯ. ಹಾಗಾಗಿ ಡಾ| ರಘು ಅವರು ಗೆಲ್ಲುವುದು ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next