Advertisement

ಕಾಂಗ್ರೆಸ್‌ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ದೇಶ ಒಡೆಯುವ ಹುನ್ನಾರ: ಚಕ್ರವರ್ತಿ ಸೂಲಿಬೆಲೆ

02:18 AM Apr 12, 2019 | sudhir |

ಮಂಗಳೂರು: ಕಾಂಗ್ರೆಸ್‌ ಪಕ್ಷವು ಬಿಡುಗಡೆಗೊಳಿಸಿರುವ ಚುನಾವಣೆ ಪ್ರಣಾಳಿಕೆಯಲ್ಲಿ ದೇಶವನ್ನು ಒಡೆಯುವ ಹುನ್ನಾರವಿದೆ. ದೇಶ ದ್ರೋಹಿಗಳಿಗೆ ಹಾದಿ ಸುಗಮ ವಾಗುವಂತೆ ಮತ್ತು ದೇಶ ಕಾಯುವ ಸೈನಿಕರ ರಕ್ಷಣೆಗಿರುವ ಕಾನೂನನ್ನು ತೆಗೆದು ಹಾಕುವಂಥ ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ ಎಂದು ವಾಗ್ಮಿ, ಟೀಂ ಮೋದಿ ತಂಡದ ಮುಖಂಡ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸೆಡಿಷನಲ್‌ ಕಾನೂನನ್ನು ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ದೇಶ ದ್ರೋಹದ ಕೆಲಸ ಮಾಡುವವರನ್ನು ಶಿಕ್ಷಿಸಲು ಇರುವ ಈ ಕಾನೂನನ್ನು ತೆಗೆದು ಹಾಕಿದರೆ, ದೇಶ ದ್ರೋಹ ಕೃತ್ಯಗಳನ್ನು ಎಸಗುವವರು ಬಚಾವಾಗಲು ಹಾದಿ ಸುಗಮ ವಾದಂತಾಗುತ್ತದೆ. ಈ ಕಾನೂನನ್ನು ತೆಗೆದು ಹಾಕುವುದರಿಂದ ರಾಜ ದ್ರೋಹದ ಕೆಲಸ ಮಾಡಿದವರು, ದೇಶದ ವಿರುದ್ಧ ಮಾತನಾಡುವವರು,

ನಕ್ಸಲ್‌ವಾದಿಗಳಿಗೆ ಕಾನೂನಿನ ಭಯ ಇಲ್ಲದಂತಾಗುತ್ತದೆ. ಅಲ್ಲದೆ, ಅತ್ಯಂತ ಸಂದಿಗ್ಧ ಪರಿಸ್ಥಿತಿ, ಕಠಿನ ಜಾಗಗಳಲ್ಲಿ ಕೆಲಸ ಮಾಡುವ ಸೈನಿಕರ ರಕ್ಷಣೆಗಿರುವ “ಆಪ್‌ಸ್ಪಾ’ ಕಾನೂನನ್ನೂ ಅವಶ್ಯವಿದ್ದಲ್ಲಿ ತೆಗೆದು ಹಾಕುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ಆ ಮೂಲಕ, ದೇಶ, ಸೈನಿಕರಿಗೆ ಶಕ್ತಿ ತುಂಬುವ ಬದಲು ದೇಶ ಒಡೆಯುವ ಕೆಲಸವನ್ನು ಮಾಡಲು ಕಾಂಗ್ರೆಸ್‌ ಹೊರಟಿದೆ ಎಂದವರು ಆಪಾದಿಸಿದರು.

ಬಿಜೆಪಿ ಪ್ರಣಾಳಿಕೆಯಿಂದ ದೇಶಕ್ಕೆ ಶಕ್ತಿ
ಸಂವಿಧಾನದ 35ನೇ ಪರಿಚ್ಛೇದ ಹಾಗೂ 370ನೇ ಪರಿಚ್ಛೇದವನ್ನು ತೆಗೆದು ಹಾಕುವುದಾಗಿ ನರೇಂದ್ರ ಮೋದಿಯವರು ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಕಟಿಸುವ ಮೂಲಕ ಇಡೀ ದೇಶವೇ ಹೆಮ್ಮೆಪಡುವ ಕೆಲಸ ಮಾಡಿದ್ದಾರೆ. ಇದರಿಂದ ಕ್ರಮವಾಗಿ ಸೈನ್ಯ ವ್ಯವಸ್ಥೆ ಬಲಾಡ್ಯವಾಗುವುದರೊಂದಿಗೆ, ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದಾಗಲಿದೆ. ಈವರೆಗೆ ಮೋದಿ ಸಾಧನೆ ಅದ್ವಿತೀಯ. ರಾಷ್ಟ್ರಹಿತಕ್ಕಾಗಿ ಅವರು ಮತ್ತೂಮ್ಮೆ ಪ್ರಧಾನಿಯಾಗುವುದು ನಿಚ್ಚಳ ಎಂದರು.

ಹಗಲುಗನಸಿನ ಆಶ್ವಾಸನೆ
ನ್ಯಾಯ್‌ ಯೋಜನೆಯನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಕಾಂಗ್ರೆಸ್‌ನ ನಡೆ ಹಗಲುಗನಸು ಕಾಣುವವನ ಆಶ್ವಾಸನೆಯಂತಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ರಾಹುಲ್‌ ಗಾಂಧಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಇದು ಆಗದಿರುವ ಸಂಗತಿ. ಹೇಗೆ ಹಣ ನೀಡುತ್ತೀರಿ ಎಂದು ಕೇಳಿದರೆ, ಆ ಪಕ್ಷದ ಯಾವುದೇ ನಾಯಕರಲ್ಲಿ ಸ್ಪಷ್ಟ ಉತ್ತರವಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದರು.

Advertisement

ರಾಷ್ಟ್ರ ಹಿತಕ್ಕಾಗಿ ಮೋದಿ
ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕಾದರೆ, ಪ್ರತಿ ಲೋಕಸಭಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ರಾಷ್ಟ್ರ ಮೊದಲು ಎಂಬ ಚಿಂತನೆಯನ್ನಿಟ್ಟುಕೊಂಡು ದೇಶ ಬಲಾಡ್ಯವಾಗಲು ಬಿಜೆಪಿಯ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದುವರು ಮನವಿ ಮಾಡಿದರು.

ಪಾಕ್‌ ಪ್ರಧಾನಿ ಹೇಳಿಕೆ ಅಸ್ತ್ರ
ನರೇಂದ್ರ ಮೋದಿಯವರಿಂದಾಗಿ ಶಾಂತಿ ಮಾತುಕತೆಗೆ ಭಂಗ ಉಂಟಾಗಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು. ಆದರೆ, ಈಗ ವರಸೆ ಬದಲಿಸಿ ನರೇಂದ್ರ ಮೋದಿ ಪ್ರಧಾನಿಯಾದರೆ ಶಾಂತಿ ಮಾತುಕತೆಗೆ ಉತ್ತಮವಾಗಲಿದೆ ಎನ್ನುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಅಸ್ತ್ರ ನೀಡಬೇಕೆಂದೇ ಅವರು ಹೀಗೆ ಹೇಳಿದ್ದಾರೆಯೋ ಅಥವಾ ಕಾಂಗ್ರೆಸ್‌ ಪಕ್ಷವೇ ಹೀಗೆ ಮಾತಾಡಿಸಿದೆಯೋ ಗೊತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರತ ಎಂದರೆ ಮೋದಿ
ಬೆಂಗಳೂರಿನಲ್ಲಿ ಇತ್ತೀಚೆಗೆ ತಾನು ಭಾರತ್‌ ಮಾತಾ ಕೀ ಜೈ ಎನ್ನುತ್ತಿದ್ದಂತೆ ಕಾಂಗ್ರೆಸ್‌ ಬೆಂಬಲಿಗರ ಗುಂಪೊಂದು ರಾಹುಲ್‌ ಗಾಂಧೀ ಕೀ ಜೈ ಎಂದು ಘೋಷಣೆ ಕೂಗಿತ್ತು. ತಾನು ನರೇಂದ್ರ ಮೋದೀ ಕೀ ಜೈ ಎಂದಿದ್ದರೆ, ಅವರು ರಾಹುಲ್‌ ಗಾಂಧಿಗೆ ಜೈ ಎನ್ನುವುದರಲ್ಲಿ ಅರ್ಥವಿತ್ತು. ಆದರೆ, ಭಾರತಕ್ಕೆ ಜೈಕಾರ ಹಾಕಿದರೆ ಅವರು ರಾಹುಲ್‌ಗೆ ಜೈಕಾರ ಹಾಕುತ್ತಾರೆ ಎಂದಾದರೆ, ಭಾರತಕ್ಕೆ ಸರಿಯಾದ ನಾಯಕ ಮೋದಿ ಎಂಬಂತಾಗಿದೆ ಎಂಬುದು ಅವರಿಗೂ ಗೊತ್ತಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

300 ಸೀಟು ಖಚಿತ
ದೇಶದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟು ಗೆಲ್ಲುವುದು ಖಚಿತ. ರಾಜ್ಯದಲ್ಲಿ 20 ಸೀಟನ್ನು ಬಿಜೆಪಿ ಗೆಲ್ಲಲಿದೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌. ಡಿ. ದೇವೇಗೌಡರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷ 28 ಸೀಟು ಗೆಲ್ಲಲಿದೆ ಎಂದಿದ್ದರು. ಆದರೆ, ಇತ್ತೀಚೆಗೆ 12 ಸೀಟು, ಬಳಿಕ 10 ಸೀಟಾದರೂ ಗೆಲುವು ಕಾಣಬೇಕು ಎನ್ನುತ್ತಿದ್ದಾರೆ. ಇದರರ್ಥ ರಾಜ್ಯದ ದಿಕ್ಕು ಯಾವ ಕಡೆಗಿದೆ ಎಂಬುದು ಅವರಿಗೂ ಮನದಟ್ಟಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next