Advertisement

ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಾಳೆ ಬಿಜೆಪಿ ಬೃಹತ್‌ ಪ್ರತಿಭಟನೆ

03:45 AM Feb 19, 2017 | |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರ (ಫೆ. 20)ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಅಶ್ವತ್ಥ ನಾರಾಯಣ, “ಮುಖ್ಯಮಂತ್ರಿಗಳು ಕಾಂಗ್ರೆಸ್‌ ಹೈಕಮಾಂಡ್‌ಗೆ 1000 ಕೋಟಿ ರೂ. ಕಪ್ಪ ಕಾಣಿಕೆ ನೀಡಿದ್ದಾರೆ ಎಂಬುದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಅವರ ಬಳಿ ಪತ್ತೆಯಾದ ಡೈರಿಯಿಂದ ಗೊತ್ತಾಗಿದೆ. ಹಾಗೆಯೇ ಸಚಿವ ರಮೇಶ್‌ ಜಾರಕಿಹೊಳಿ ಅವರ ಮನೆ, ಕಚೇರಿಯಲ್ಲಿ ಐಟಿ ದಾಳಿ ವೇಳೆ 162 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಪತ್ತೆಯಾಗಿದೆ. ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದು ದೂರಿದರು.

“ಸಾಕ್ಷ್ಯಸಹಿತ ಆರೋಪ ಮಾಡಿದರೂ ಮುಖ್ಯಮಂತ್ರಿಗಳು ತಳ್ಳಿಹಾಕುತ್ತಾರೆ. ಗೋವಿಂದರಾಜು ಅವರ ಬಳಿ ಪತ್ತೆಯಾಗಿರುವ ಡೈರಿಯಲ್ಲಿ ಉಕ್ಕಿನ ಮೇಲ್ಸೇತುವೆ ಯೋಜನೆಗೆ ಸಂಬಂಧಪಟ್ಟಂತೆ 65 ಕೋಟಿ ರೂ. ಪಡೆಯಲಾಗಿದೆ ಎಂದು ದಾಖಲಾಗಿದೆ. ಈ ಡೈರಿ ಬಗ್ಗೆ ಕೇಳಿದರೆ ಮುಖ್ಯಮಂತ್ರಿಗಳು ಹಾರಿಕೆ ಉತ್ತರ ನೀಡುತ್ತಾರೆ. ಇದೊಂದು ಕಿಕ್‌ಬ್ಯಾಕ್‌ ಸರ್ಕಾರದ್ದು, ಇದರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ಅವರ ಸಂಭಾಷಣೆಯನ್ನು ತಿರುಚಿ ಗೊಂದಲ ಸೃಷ್ಟಿಸಲಾಗುತ್ತಿದೆ. ಸಂಪೂರ್ಣ ಮಾತುಕತೆಯ ಸಿ.ಡಿಯನ್ನು ಜನರ ಮುಂದಿಟ್ಟರೆ ಸತ್ಯಾಂಶ ಗೊತ್ತಾಗಲಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

ನಗರ ಘಟಕದ ಅಧ್ಯಕ್ಷ ಪಿ.ಎನ್‌.ಸದಾಶಿವ, “ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಫೆ.20ರಂದು ಬೆಳಗ್ಗೆ 11 ಗಂಟೆಗೆ ಪುರಭವನ ಮುಂಭಾಗ ಬೃಹತ್‌ ಪ್ರತಿಭಟನೆ ನಡೆಯಲಿದ್ದು ನಂತರ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು. ಶಾಸಕ ವೈ.ಎ.ನಾರಾಯಣಸ್ವಾಮಿ, “ಶಾಸಕ ಎಂ.ಟಿ.ಬಿ.ನಾಗರಾಜ್‌ ನಿವಾಸ ಹಾಗೂ ಕಚೇರಿಯಲ್ಲಿ ಐಟಿ ದಾಳಿ ವೇಳೆ 130 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ದೂರಿದರು.

Advertisement

ನಗರ ಪೊಲೀಸ್‌ ಆಯುಕ್ತರಿಗೆ ದೂರು
ಈ ಮಧ್ಯೆ, ಸಚಿವರಾದ ರಮೇಶ್‌ಕುಮಾರ್‌, ಬಸವರಾಜ ರಾಯರೆಡ್ಡಿ, ಎಂ.ಬಿ.ಪಾಟೀಲ್‌, ಡಾ.ಶರಣ್‌ಪ್ರಕಾಶ್‌ ಪಾಟೀಲ್‌ ಹಾಗೂ   ಈಶ್ವರ ಖಂಡ್ರೆ ಹಾಗೂ ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ವಿರುದ್ಧ ಬಿಜೆಪಿಯು ನಗರ ಪೊಲೀಸ್‌ ಆಯುಕ್ತರಿಗೆ ದೂರು ದಾಖಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ನಡುವಿನ ಸಂಭಾಷಣೆಯ ಸಿಡಿ ತಿರುಚಲಾಗಿದೆ. ತಿರುಚಿದ ಸಿಡಿ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಿ ತೇಜೋವಧೆಗೆ ಯತ್ನಿಸಲಾಗಿದೆ. ಹೀಗಾಗಿ, ಐಪಿಸಿ ಸೆಕ್ಷನ್‌ 196 ಹಾಗೂ ಎಸ್‌ಐಟಿ ಕಾಯ್ದೆ  43 (6)ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.  ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ವಿಜಯಕುಮಾರ್‌, ವಕ್ತಾರ ಅಶ್ವಥ್‌ನಾರಾಯಣ, ಬಿಬಿಎಂಪಿ ಪ್ರತಿಪಕ್ಷ ನಾಯಕ  ಪದ್ಮನಾಭರೆಡ್ಡಿ ಆಯುಕ್ತರನ್ನು ಭೇಟಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next