ಹೊಸಕೋಟೆ: ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೊಸಕೋಟೆ ರಾಜ್ಯದಲ್ಲಿಯೇ ಹೆಸರಾಗಿದ್ದು, ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಟ್ ಇದೆ. ಈಗಾಗಲೇ ಎರಡು ಪಕ್ಷಗಳ ಮತಬೇಟೆ ಜೋರಾಗಿದ್ದು, ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ಬಿಸಿ ವಾತಾವರಣ ಶುರುವಾಗಿದೆ.
ತಾಲೂಕಿನಲ್ಲಿ ಯಾವುದೇ ಚುನಾವಣೆಗಳು ನಡೆದರೂ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮೆಗಾ ಪೈಟ್ ಇರುತ್ತದೆ. ಈ ಬಾರಿಯೂ ಸಹ ನೇರ ಪೈಟ್ ಕ್ಷೇತ್ರಾದ್ಯಂತ ಶುರುವಾಗಿದೆ. ಇಲ್ಲಿ ಪಕ್ಷೇತರರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಾಗಿದ್ದು, ಪ್ರಚಾರದಲ್ಲಿ ಹಿಂದೆ ಬಿದ್ದಿವೆ.
ಕಳೆದ ಬಾರಿ ಜೆಡಿಎಸ್ ಸಹ ಇಲ್ಲಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಈ ಬಾರಿಯೂ ಸಹ ಜೆಡಿಎಸ್ ಅಭ್ಯರ್ಥಿಯನ್ನು ಹಾಕಿಲ್ಲ. ಬಿಎಸ್‌ಪಿ ಮತ್ತು ಎಎಪಿ ಅಭ್ಯರ್ಥಿಗಳು ಕಣದಲ್ಲಿದ್ದರೂ, ಪ್ರಚಾರದಲ್ಲಿ ಹಿಂದಿವೆ. ಶತಾಯಗತಾಯ ಗೆಲ್ಲಲೇಬೇಕು ಎಂದು ಎರಡು ರಾಷ್ಟ್ರೀಯ ಪಕ್ಷಗಳು ಹಠಕ್ಕೆ ಬಿದ್ದಿವೆ.
ಕಾರ್ಯಕರ್ತರಿಂದ ಬಿರುಸಿನ ಪ್ರಚಾರ: ಬಿಜೆಪಿ ಮತ ಸೆಳೆಯಲು ಈಗಾಗಲೇ ಜೆ.ಪಿ ನಡ್ಡಾ ಅವರನ್ನು ಕರೆಸಿ ರೋಡ್ ಶೋ ಮಾಡಿದ್ದು, ಕಾಂಗ್ರೆಸ್ ಸಹ ಇದಕ್ಕೆ ಪ್ರತಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಅವರನ್ನು ಕರೆಸಿ ರೋಡ್ ಶೋ ನಡೆಸಲಾಗಿದೆ. ಗ್ರಾಮಗಳಲ್ಲಿ ಬಿರುಸಿನ ಮನೆ ಮನೆ ಪ್ರಚಾರಗಳನ್ನು ಎರಡು ಪಕ್ಷಗಳ ಕಾರ್ಯಕರ್ತರು ಕೈಗೊಂಡಿದ್ದು, ಪಕ್ಷಗಳ ಸಾಧನೆ ಬಗ್ಗೆ ತಿಳಿಸಿ ಮತಯಾಚನೆ ಮಾಡುತ್ತಿದ್ದಾರೆ. ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಎರಡು ಪಕ್ಷದ ಅಭ್ಯರ್ಥಿಗಳು ಪ್ರಚಾರ ಮುಗಿಸಿದ್ದಾರೆ. ಸ್ಟಾರ್ ಪ್ರಚಾರಕರನ್ನು ಕರೆಸಿ ರೋಡ್ ಶೋ ಮೂಲಕ ಮತದಾರರ ಮನ ಗೆಲ್ಲಲು ಹೊರಟಿದ್ದು, ಮತದಾನಕ್ಕೆ ಇನ್ನು ಕೇವಲ 4 ದಿನಗಳಷ್ಟೆ ಬಾಕಿ ಇದ್ದು, ಕಾರ್ಯಕರ್ತರ ಪ್ರಚಾರ ಬಿರುಸಿನಿಂದ ಕೂಡಿದೆ.
ಎಂಟಿಬಿ-ಶರತ್ ನಡುವೆ ನೇರ ಹಣಾಹಣಿ: 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಸೋಲುಂಡಿದ್ದ ಎಂಟಿಬಿ ನಾಗರಾಜ, ಈ ಬಾರಿ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಹೊಂಚು ಹಾಕಿದ್ದರೆ, ಇತ್ತ ಹಾಲಿ ಶಾಸಕ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೆಸರಲ್ಲಿ ಗೆದ್ದು ಶಾಸಕರಾಗಿ ನಾಲ್ಕು ವರ್ಷಗಳಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ.
ಕಡಿಮೆ ಅಂತರದಲ್ಲಿ ಕಾದಾಟ: ತಾಲೂಕಾದ್ಯಂತ ಎರಡು ಪಕ್ಷಗಳು ಗೆಲುವು ನಮ್ಮದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮತದಾರರು 55 ಸಾವಿರಕ್ಕೂ ಹೆಚ್ಚಿದ್ದು, ಇವರ ಮತಗಳೇ ನಿರ್ಣಾಯಕವಾಗಿವೆ. ಮುಸ್ಲಿಮರು ಸಹ 30 ಸಾವಿರದಷ್ಟಿದ್ದು, ಇವುಗಳು ಕಾಂಗ್ರೆಸ್ ಪರ ವಾಲಲಿವೆ ಎಂದು ಸುದ್ದಿಗಳು ಹರದಾಡುತ್ತಿವೆ. ಒಟ್ಟಾರೆ, ಯಾರೇ ಗೆದ್ದರೂ 5 ಸಾವಿರದ ಅಂಚಿನಲ್ಲಿ ಗೆಲ್ಲುತ್ತಾರೆ ಎಂದು ಅಲ್ಲಲ್ಲಿ ಮತನಾಡುತ್ತಿರುವುದು ಕಂಡು ಬರುತ್ತಿದೆ.
ನಾನು ಸೋತರೂ ಬಿಜೆಪಿ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಸ್ಥಾನ ನೀಡಿದ್ದು, ತಾಲೂಕಿನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಈ ಬಾರಿ ನನ್ನ ಕೈ ಹಿಡಿಯಲಿದೆ. ದೇವಾಲಯಗಳ ನಿರ್ಮಾಣಕ್ಕೆ ಸಹಕಾರ, ಮೋದಿ ಪ್ರಚಾರ ಈ ಬಾರಿ ನನಗೆ ಗೆಲುವಿಗೆ ಕಾರಣವಾಗಲಿದೆ.
– ಎಂಟಿಬಿ ನಾಗರಾಜ, ಪೌರಾಡಳಿತ ಸಚಿವ
ಕಳೆದ ಉಪಚುನಾವಣೆಯಲ್ಲಿ ಸ್ವಾಭಿಮಾನಿಯಾಗಿ ಗೆದ್ದು, ತಾಲೂಕಿನ ಜನರ ಸುಖ- ದುಃಖಗಳಲ್ಲಿ ಭಾಗಿಯಾಗಿದ್ದೇನೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಈಗಿನ ಗ್ಯಾರಂಟಿ ಕಾರ್ಡ್ ಘೋಷಣೆ ನಮ್ಮ ಕೈ ಹಿಡಿಯಲಿದೆ.
– ಶರತ್ ಬಚ್ಚೇಗೌಡ, ಶಾಸಕ
-ಕಾಂತರಾಜ್