Advertisement
ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಗಿಂತಲೂ ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡುವುದೇ ದೊಡ್ಡ ಸವಾಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ತಿರಸ್ಕರಿಸಲಿದ್ದು, ಜೆಡಿಎಸ್ ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ಒಂದೆರಡು ಸ್ಥಾನಗಳನ್ನು ಸಿಪಿಎಂ, ಸಿಪಿಐ ಹಾಗೂ ಬಿಎಸ್‌ಪಿಗೆ ಬಿಟ್ಟು ಕೊಡುವ ಕುರಿತು ಮಾತುಕತೆ ನಡೆಸಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ಹಿಂದಿಗಿಂತ ಬಲಿಷ್ಠವಾಗಿದ್ದು, ಕಾರ್ಯಕರ್ತರು ಪೂರ್ಣ ರೀತಿಯಲ್ಲಿ ಚುನಾವಣೆಗೆ ಸಜ್ಜಾಗಿದ್ದಾರೆ ಎನ್ನುತ್ತಾರೆ ಮೊಹಮ್ಮದ್ ಕುಂಞಿ.
ಜೆಡಿಎಸ್ ರಾಜ್ಯ ಸರಕಾರದ ವೈಫಲ್ಯಗಳನ್ನು ಜನತೆಗೆ ತಿಳಿಸುವ ಪ್ರಯತ್ನ ಮಾಡಲಿದೆ. ಜತೆಗೆ ರಾಜ್ಯದಲಿ ಅಧಿಕಾರಕ್ಕೆ ಬಂದು, ಮುಖ್ಯವಾಗಿ ಜಿಲ್ಲೆಯಲ್ಲಿ ಶಾಂತಿ – ಸುವ್ಯವಸ್ಥೆ ಮರು ಸ್ಥಾಪಿಸುವ ಭರವಸೆ ನೀಡಲಿದೆ. ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು ಶಾಂತಿ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಮರ್ಥ ಅಧಿಕಾರಿಗಳನ್ನು ನೇಮಿಸಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಜೆಡಿಎಸ್ ಜನತೆಗೆ ನೀಡಲಿದೆ.
Related Articles
Advertisement
ಸಾಮರಸ್ಯ ನಡಿಗೆಗೆ ಸಿದ್ಧತೆಈ ಹಿಂದೆ ಜಿಲ್ಲೆಯ ಸಾಮರಸ್ಯ ಹದಗೆಟ್ಟಾಗ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಜಿಲ್ಲೆಯಲ್ಲಿ ಮಂಗಳೂರಿನಿಂದ ಕಲ್ಲಡ್ಕದ ವರೆಗೆ ಸಾಮರಸ್ಯದ ನಡಿಗೆಗಾಗಿ ತೀರ್ಮಾನಿಸಿದ್ದರು. ಬಿಜೆಪಿ, ಕಾಂಗ್ರೆಸ್, ಎಸ್‌ಡಿಪಿಐಯನ್ನು ಹೊರತು ಪಡಿಸಿ ಇತರ ಸಂಘಟನೆಗಳನ್ನು ಸೇರಿಕೊಂಡು ನಡಿಗೆಗೆ ಸಿದ್ಧತೆ ನಡೆಸಲಾಗಿತ್ತು. ‘ಇದನ್ನು ನಾನು ಓಟಿಗಾಗಿ ಮಾಡುತ್ತಿಲ್ಲ, ಜಿಲ್ಲೆಯ ಸಾಮರಸ್ಯದ ಗತವೈಭವ ಮರುಕಳಿಸಲು ಮಾಡುತ್ತಿದ್ದೇನೆ’ ಎಂದು ದೇವೇಗೌಡ ತಿಳಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಾಮರಸ್ಯ ಸಮಾವೇಶಕ್ಕೆ ತೀರ್ಮಾನಿಸಲಾಯಿತು. ಆದರೆ ಆ ವೇಳೆ ಸುರತ್ಕಲ್‌ನಲ್ಲಿ ಅಹಿತಕರ ಘಟನೆಗಳು ನಡೆದು ಅದನ್ನೂ ಕೈಬಿಡಲಾಗಿತ್ತು. ಈ ರೀತಿ ಜೆಡಿಎಸ್ ಜಿಲ್ಲೆಯ ಸಾಮರಸ್ಯಕ್ಕಾಗಿ ನಿರಂತರ ಶ್ರಮಿಸುತ್ತಿದ್ದು, ಜನತೆ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎನ್ನುತ್ತಾರೆ ಮೊಹಮ್ಮದ್ ಕುಂಞಿ. ನಾನು ಅಧ್ಯಕ್ಷನಾದ ಬಳಿಕ ಪಕ್ಷವನ್ನು ತಳಮಟ್ಟದಿಂದಲೇ ಬಲಿಷ್ಠಗೊಳಿಸುತ್ತಾ ಬಂದಿದ್ದೇನೆ. ನಮ್ಮ ನಾಯಕ ಕುಮಾರಸ್ವಾಮಿ ಅವರು ಕೂಡ ಈ ಕುರಿತು ನಿರ್ದೇಶನ ನೀಡಿದ್ದಾರೆ. ಮಾ. 23ರಂದು ಸಂಜೆಯಿಂದ ತಡರಾತ್ರಿ ವರೆಗೂ ಬೆಂಗಳೂರಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸಭೆ ನಡೆಸಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ. ರೈತರ ಸಾಲಮನ್ನಾ, ಅಡಿಕೆ-ರಬ್ಬರ್ ಬೆಳೆಗಾರರ ಸಮಸ್ಯೆ ಮೊದಲಾದ ಜ್ವಲಂತ ಸಮಸ್ಯೆಗಳು ಕುರಿತು ಕಾಂಗ್ರೆಸ್, ಬಿಜೆಪಿ ಮಾತನಾಡುತ್ತಿಲ್ಲ. ಜೆಡಿಎಸ್ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಗೆಲುವು ತಂದುಕೊಡಲಿವೆ ಎಂದು ಕುಂಞಿ ಅವರು ವಿವರಿಸುತ್ತಾರೆ. ಸಂಭಾವ್ಯ ಅಭ್ಯರ್ಥಿಗಳು
ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ ಕೆಲವು ಅಭ್ಯರ್ಥಿಗಳ ಹೆಸರುಗಳು ಕೇಳಿಬರುತ್ತಿವೆ. ಮೂಡಬಿದಿರೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಮಂಗಳೂರು ದಕ್ಷಿಣದಲ್ಲಿ ಅಶ್ರಫ್, ಮಂಗಳೂರಿನಲ್ಲಿ ಅಶ್ರಫ್, ಗಂಗಾಧರ್ ಉಳ್ಳಾಲ, ಪುತ್ತೂರು ಅಥವಾ ಬೆಳ್ತಂಗಡಿಯಲ್ಲಿ ಎಂ.ಬಿ. ಸದಾಶಿವ, ಮಂಗಳೂರು ಉತ್ತರದಲ್ಲಿ ರಮೇಶ್, ಬಂಟ್ವಾಳದಲ್ಲಿ ಮೊಹಮ್ಮದ್ ಕುಂಞಿ ಮೊದಲಾದ ಹೆಸರು
ಚಾಲ್ತಿಯಲ್ಲಿದ್ದು, ಇದು ಯಾವುದು ಕೂಡ ಅಂತಿಮವಲ್ಲ. ಸುಳ್ಯದಲ್ಲಿ ಬಿಎಸ್‌ಪಿ, ಮಂಗಳೂರಿನ ಕ್ಷೇತ್ರಗಳಲ್ಲಿ ಸಿಪಿಎಂ, ಸಿಪಿಐಗೆ ಬಿಟ್ಟು ಕೊಡುವ ಕುರಿತು ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಸಮಾವೇಶಗಳನ್ನು ನಡೆಸಲಿದೆ. ಜತೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಮೊದಲಾದ ಗಣ್ಯರು ಜಿಲ್ಲೆಯಲ್ಲಿ ಪ್ರಚಾರ ಕಾರ್ಯವನ್ನು ಮಾಡಲಿದ್ದಾರೆ. ಜತೆಗೆ ಸ್ಥಳೀಯ ನಾಯಕರು ಪಕ್ಷವನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ ಎಂದು ವಿವರಿಸಿದರು. ಜೆಡಿಎಸ್‌ನತ್ತ ಬರಲಿದ್ದಾರೆ…
ಕಾಂಗ್ರೆಸ್‌ನಿಂದ ಮಾಜಿ ಮೇಯರ್ ಅಶ್ರಫ್ ಅವರು ಈಗಾಗಲೇ ಜೆಡಿಎಸ್ ಸೇರಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿಯ ಪ್ರಮುಖ ನಾಯಕರು ಜೆಡಿಎಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಬಂಟ್ವಾಳ, ಪುತ್ತೂರು ಮೊದಲಾದ ಪ್ರದೇಶಗಳಲ್ಲಿ ಬಿಜೆಪಿ ಪ್ರಮುಖ ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಪ್ರಸ್ತುತ ಅವರು ಟಿಕೆಟ್ ಹಂಚಿಕೆಗಾಗಿ ಕಾಯುತ್ತಿದ್ದು, ಬಳಿಕ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಕೆಲವು ನಾಯಕರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದು, ಅವರು ಕೂಡ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರು, ಕೃಷಿಕರು ಜೆಡಿಎಸ್‌ನತ್ತ ಒಲವು ವ್ಯಕ್ತಪಡಿಸಿದ್ದಾರೆ. ನಾವು ಗ್ರಾಮೀಣ ಭಾಗಕ್ಕೆ ತೆರಳಿದ ಸಂದರ್ಭದಲ್ಲಿ ಜೆಡಿಎಸ್‌ಗೆ ಮತ ಹಾಕುವ ಭರವಸೆ ನೀಡಿದ್ದಾರೆ ಎಂದು ಮೊಹಮ್ಮದ್ ಕುಂಞಿ ಅವರು ವಿವರಿಸುತ್ತಾರೆ. ಕಿರಣ್ ಸರಪಾಡಿ