ವಾರ್ಧಾ: ಕಾಂಗ್ರೆಸ್ ಪಕ್ಷವನ್ನು “ತುಕ್ಡೆ ತುಕ್ಡೆ” ಗ್ಯಾಂಗ್ ಮತ್ತು ನಗರ ನಕ್ಸಲರು ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಸೆ20) ತೀವ್ರ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ” ಇಂದು ನೀವು ನೋಡುತ್ತಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರಂತಹ ಮಹಾನ್ ವ್ಯಕ್ತಿಯನ್ನು ಹೊಂದಿರುವ ಪಕ್ಷವಲ್ಲ. ಕಾಂಗ್ರೆಸ್‌ನಲ್ಲಿ ದ್ವೇಷದ ಭೂತ ಪ್ರವೇಶಿಸಿದ್ದು, ದೇಶಭಕ್ತಿಯ ಆತ್ಮ ಕೊನೆಯುಸಿರೆಳೆದಿದೆ. ಇಂದಿನ ಕಾಂಗ್ರೆಸ್ ಗಣಪತಿ ಪೂಜೆಯನ್ನು ಕೂಡ ದ್ವೇಷಿಸುತ್ತಿದೆ. ಗಣೇಶ ಪೂಜೆ ಕಾರ್ಯಕ್ರಮಕ್ಕೆ ಹೋದಾಗ ಕಾಂಗ್ರೆಸ್ ತುಷ್ಟೀಕರಣದ ಭೂತ ಎದ್ದಿತು. ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಏನು ಬೇಕಾದರೂ ಮಾಡುತ್ತದೆ” ಎಂದು ಕಿಡಿ ಕಾರಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಗಣಪತಿ ಬಪ್ಪನನ್ನು ಕಂಬಿ ಹಿಂದೆ ಹಾಕಿತು. ಜನರು ಪೂಜಿಸುತ್ತಿದ್ದ ಗಣಪತಿಯ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇರಿಸಲಾಯಿತು ಎಂದು ಆಕ್ರೋಶ ಹೊರ ಹಾಕಿದರು.
ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ಅಮೆರಿಕದಲ್ಲಿ ನೀಡಿದ ಹೇಳಿಕೆಗಾಗಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ ”ವಿದೇಶದಲ್ಲಿ ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ನಾಯಕರ ಭಾರತ ವಿರೋಧಿ ಅಜೆಂಡಾಗಳ ಬಗ್ಗೆಯೂ ಕಿಡಿ ಕಾರಿದರು.
”ವಿಶ್ವಕರ್ಮ ಯೋಜನೆಯ ಮೂಲ ಮನೋಭಾವವೆಂದರೆ ಗೌರವ, ಶಕ್ತಿ ಮತ್ತು ಸಮೃದ್ಧಿ. ಅಂದರೆ ಸಾಂಪ್ರದಾಯಿಕ ಕೌಶಲ್ಯಗಳಿಗೆ ಗೌರವ, ಕುಶಲಕರ್ಮಿಗಳ ಸಬಲೀಕರಣ ಮತ್ತು ವಿಶ್ವಕರ್ಮ ಸಹೋದರರ ಜೀವನದಲ್ಲಿ ಸಮೃದ್ಧಿ, ಇದು ನಮ್ಮ ಗುರಿಯಾಗಿದೆ.ವಿಶ್ವಕರ್ಮ ಯೋಜನೆಯ ಇನ್ನೊಂದು ವೈಶಿಷ್ಟ್ಯವಿದೆ. ಈ ಯೋಜನೆಗಾಗಿ ವಿವಿಧ ಇಲಾಖೆಗಳು ಒಗ್ಗೂಡಿದ ಪ್ರಮಾಣವೂ ಅಭೂತಪೂರ್ವವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.