Advertisement

ಪರಂ ಶ್ರಮದಿಂದ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ: ದಿನೇಶ್‌

01:23 PM Aug 07, 2017 | Team Udayavani |

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ)ಯ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ 66ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸದಾಶಿವನಗರದ ಅವರ ನಿವಾಸಕ್ಕೆ ಸಚಿವರು, ಪಕ್ಷದ ಪ್ರಮುಖ ನಾಯಕರು, ಶಾಸಕರು, ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಭೇಟಿ ನೀಡಿ ಶುಭ ಕೋರಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಪ್ರಿಯಾಂಕ್‌ ಖರ್ಗೆ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳ್ಕರ್‌, ಶಾಸಕ ಮುನಿರತ್ನ, ಮೇಯರ್‌ ಜಿ.ಪದ್ಮಾವತಿ ಸೇರಿದಂತೆ ಹಲವು ಭೇಟಿ ನೀಡಿ ಶುಭಕೋರಿದರು. 

Advertisement

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಪರಮೇಶ್ವರ್‌ ಅವರು ಪಕ್ಷದ ನಾಯಕತ್ವವನ್ನು ವಹಿಸಿಕೊಂಡಿದ್ದು, 2018ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲಿದ್ದಾರೆ. ಅದಕ್ಕಾಗಿ ಅವರು ಅತ್ಯಂತ ಚುರುಕಿನಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು. 

ಡಿ.ಕೆ.ಶಿವಕುಮಾರ್‌ ಅವರ ಮನೆ ಮೇಲೆ ಐಟಿ ದಾಳಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಈಗಾಗಲೇ ಅಮಿತ್‌ ಷಾ ಹಾಗೂ ನರೇಂದ್ರ ಮೋದಿವರ ಕುತಂತ್ರವೇನು ಎಂಬುದು ಜನರಿಗೆ ಗೊತ್ತಾಗಿದ್ದು, ಇಂತಹ ಕೀಳು ಮಟ್ಟದ ರಾಜಕಾರಣವನ್ನು ಜನರು ಎಂದಿಗೂ ಸಹಿಸುವುದಿಲ್ಲ ಎಂದರು. 

ಪ್ರತಿಪಕ್ಷದವರ ವಿರುದ್ಧ ಸುಳ್ಳು ಆರೋಪ ಮಾಡುವುದು, ಘರ್ಷಣೆಗಳ ಮೂಲಕ ಸೇಡಿನ ರಾಜಕಾರಣವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮೋದಿ ಪರ ನಿಲ್ಲದಿದ್ದರೆ ಹೆದರಿಸುವ ಕೆಲಸ ನಡೆಯುತ್ತಿದೆ. ಗೂಂಡಾ ರಾಜ್ಯ ದೇಶವನ್ನು ಸ್ಥಾಪಿಸುಲು ಅವರು ಮುಂದಾಗಿದ್ದು, ಸಂಸ್ಕೃತಿ ಇಲ್ಲದವರು ಅದನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. 

ಮೇಯರ್‌ ಜಿ.ಪದ್ಮಾವತಿ ಮಾತನಾಡಿ, ಪರಮೇಶ್ವರ್‌ ಅವರು ಏಳು ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ಯಶಸ್ವಿಯಾಗಿದ್ದು, ಅವರಿಗೆ ದೇವರು ಇನ್ನಷ್ಟು ಆಯುರಾರೋಗ ನೀಡಲಿ ಎಂದು ಹಾರೈಸಿದರು.  ಐಟಿ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ರಾಜಕೀಯ ಪ್ರೇರಿತ ಕೃತ್ಯವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ಕೇವಲ ಸಚಿವರಷ್ಟೇ ಅಲ್ಲ ಅವರೊಬ್ಬ ಉದ್ಯಮಿಯೂ ಆಗಿದ್ದು, ಉದ್ಯಮಿ ಅಂದ ಮೇಲೆ ಹಲವಾರು ವ್ಯವಹಾರಗಳಿರುತ್ತವೆ. ಬಿಜೆಪಿಯವರ ಇಂತಹ ತಂತ್ರಗಳಿಂದ ಅವರಿಗೆ ಹಿನ್ನಡೆಯಾಗಿದೆ ಎಂದರು. 

Advertisement

ಇದರೊಂದಿಗೆ ಬಿಜೆಪಿಯವರು ವಿರೋಧ ಪಕ್ಷದಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಯೊಂದನ್ನೂ ವಿರೋಧಿಸಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಸರ್ಕಾರದಿ ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸಲಾಗದೆ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾವುದೇ ಜನಪರ ಕೆಲಸಗಳನ್ನು ಮಾಡಲಿಲ್ಲ. ಈಗ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸುವುದು ಅವರ ಹತಾಶ ಮನೋಭಾವನೆಯನ್ನು ತೋರುತ್ತದೆ ಎಂದು ಹೇಳಿದರು. 

ಲಕ್ಷ್ಮಿ ಹೆಬ್ಟಾಳ್ಕರ್‌ ಪ್ರತ್ಯಕ್ಷ
ಡಿ.ಕೆ.ಶಿವಕುಮಾರ್‌ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದ ಸಂದರ್ಭದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಹೆಬ್ಟಾಳ್ಕರ್‌ ಭಾನುವಾರ ಪರಮೇಶ್ವರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭ ಕೋರಲು ಅವರ ನಿವಾಸಕ್ಕೆ ಬಂದಿದ್ದರು. ಈ ವೇಳೆ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. 

ಇಂದಿರಾ ಕ್ಯಾಂಟೀನ್‌ನಲ್ಲಿ ಬಿಎಸ್‌ವೈ ಊಟಮಾಡ್ತಾರೆ
ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ. ಅಷ್ಟಕ್ಕೂ ಯೋಜನೆ ವಿರೋಧಿಸಲು ಅವರು ಯಾರು. ಉಪಯೋಗವಾಗದ ಸ್ಥಳಗಳಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಬಳಿಸಿಕೊಳ್ಳಲಾಗುತ್ತಿದೆ. ಆಗಸ್ಟ್‌ 16 ಕಳೆಯಲಿ ಸ್ವತಃ ಯಡಿಯೂರಪ್ಪನೇ ಇಂದಿರಾ ಕ್ಯಾಂಟೀನ್‌ಗೆ ಹೋಗಿ ಊಟ ಮಾಡಿ ಬರುತ್ತಾರೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next