Advertisement

ಮೊಯಿಲಿ ಹಠಾವೋ ಕಾಂಗ್ರೆಸ್‌ ಬಚಾವೋ ಘೋಷಣೆ

11:43 AM Apr 17, 2018 | Team Udayavani |

ಕಾರ್ಕಳ: ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕದ ಹಿನ್ನೆಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅವರ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಕಾರ್ಕಳದಲ್ಲಿ ಪ್ರತಿಭಟನೆ ನಡೆಯಿತು.

Advertisement

ತಾಲೂಕು ಕಚೇರಿಯ ಸಮೀಪದಲ್ಲಿರುವ ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಕಚೇರಿ ಮುಂಭಾಗದಿಂದ ಎಚ್‌. ಗೋಪಾಲ ಭಂಡಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಯಿತು. ಸಾವಿರಾರು ಬೆಂಬಲಿಗರು, ಮುಖಂಡರು ಭಾಗವಹಿಸಿದ್ದರು.

ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್‌ನ ಹಿರಿಯ ಮುಖಂಡ, ಸಂಸದ ಡಾ| ಎಂ. ವೀರಪ್ಪ ಮೊಲಿ ವಿರುದ್ಧ ಘೋಷಣೆ ಕೂಗಿದರು. ಮೊಲಿ ಪ್ರತಿಕೃತಿಯನ್ನು ಸುಡಲು ಯತ್ನಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ ಹಾಗೂ ಕಾರ್ಯದರ್ಶಿ ಭರತ್‌ ಮುಂಡೋಡಿ ಭಾವಚಿತ್ರವನ್ನು ತುಳಿದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಜತೆ ಚಕಮಕಿ
2,000ಕ್ಕೂ ಅಧಿಕ ಕಾರ್ಯಕರ್ತರು ಗೋಪಾಲ ಭಂಡಾರಿ ಕಚೇರಿ ಸನಿಹಕ್ಕೆ ಧಾವಿಸಿದಾಗ ಕಚೇರಿ ಮುಂಭಾಗದಲ್ಲಿ ಪೊಲೀಸರು ತಡೆಯಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮೊಲಿ ಸ್ವಾರ್ಥ ರಾಜಕಾರಣ
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಮೊಲಿ ತನ್ನ ಮಗನಿಗೆ ಕಾರ್ಕಳದಲ್ಲಿ ರಾಜಕೀಯ ನೆಲೆ ನೀಡ
ಬೇಕು ಎನ್ನುವ ದುರುದ್ದೇಶದಿಂದ ಸ್ವಾರ್ಥ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸನ್ನು ಬಲಿ ಪಡೆಯುತ್ತಿದ್ದಾರೆ. ಕಾರ್ಕಳ ಕಾಂಗ್ರೆಸ್‌ನಿಂದ ಮೊಲಿ ಅವರನ್ನು ದೂರ ಓಡಿಸಬೇಕು. ಇಲ್ಲಿನ ನಾಯಕರಿಗೆ ವೀರಪ್ಪ ಮೊಲಿ ಬೇಕೇ ಅಥವಾ ಕಾರ್ಯಕರ್ತರು ಬೇಕೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ನಾಯಕರು ಮೊಲಿ ಸ್ವಾರ್ಥಕ್ಕೆ ಬಲಿಯಾಗುತ್ತಿದ್ದಾರೆ. ಅವರು ಇಂದಿರಾ ಗಾಂಧಿ ಹೆಸರಿನಿಂದ ಕಾರ್ಕಳದಲ್ಲಿ ಗೆಲುವು ಸಾಧಿಸಿದ್ದೇ ಹೊರತು ಸ್ವಂತ ವ್ಯಕ್ತಿತ್ವದಿಂದ ಅಲ್ಲ. ಉದಯ ಕುಮಾರ್‌ ಶೆಟ್ಟಿ ಅಲ್ಲದೆ ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ಳುವುದಿಲ್ಲ. ಕಾಂಗ್ರೆಸ್‌ ಪರ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಕಾರ್ಯಕರ್ತರಿಗೋಸ್ಕರ ಟಿಕೆಟ್‌ 
ಪ್ರತಿಭಟನೆಯ ಬಳಿಕ ತಮ್ಮ ಕಚೇರಿ ಮುಂಭಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ, ಕಾರ್ಯಕರ್ತರಿಗಾಗಿ ಟಿಕೆಟ್‌ ಕೇಳುತ್ತಿದ್ದೇನೆಯೇ ಹೊರತು ನನಗಾಗಿ ಅಲ್ಲ. ಕಾರ್ಕಳದಲ್ಲಿ ಕಾಂಗ್ರೆಸ್‌ ನೆಲಕಚ್ಚಿದ್ದಾಗ ಸಾಕಷ್ಟು ಕೆಲಸ ಮಾಡಿ ಸಂಘಟಿಸಿದ್ದೇನೆ. ಕಾಂಗ್ರೆಸ್‌ನಿಂದ ಗೆಲ್ಲುವ ಬೇರೆ ಅಭ್ಯರ್ಥಿ ಇದ್ದರೆ ಅವರಿಗೆ ಪ್ರೋತ್ಸಾಹ ನೀಡುತ್ತೇವೆ. ಕಾರ್ಯಕರ್ತರು ಆಕ್ರೋಶಕ್ಕೆ ಒಳಗಾಗಬಾರದು, ಕಾಲ ಮಿಂಚಿಲ್ಲ, ಹೈಕಮಾಂಡ್‌ ಮೇಲೆ ವಿಶ್ವಾಸವಿದೆ. ನಾನು ಎಂದೂ ಮೊಲಿ ವಿರುದ್ಧ ಮಾತನಾಡಿಲ್ಲ ಎಂದರು.

ಕಾರ್ಕಳದಲ್ಲಿ ಕಾಂಗ್ರೆಸ್‌ ಮತ್ತೂಮ್ಮೆ ಗೆಲುವು ಸಾಧಿಸಲಿದೆ. ವೀರಪ್ಪ ಮೊಯಿಲಿ ವಿರುದ್ಧ ಜನತೆ ಮಾತನಾಡಿರಬಹುದು, ಅದಕ್ಕೆ ನಾನು ಹೊಣೆಗಾರನಲ್ಲ. ಕಾರ್ಕಳದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಜಿಲ್ಲೆ ಮತ್ತು ರಾಜ್ಯ ನಾಯಕರಿಗೆ ತಿಳಿದಿದೆ. ಹೀಗಾಗಿ ಅವಕಾಶ ಸಿಗುವ ಭರವಸೆ ಇದೆ. ಕಾರ್ಯಕರ್ತರಿಗೆ ನನ್ನ ಬೆಂಬಲ ಯಾವತ್ತೂ ಇದೆ ಎಂದರು.

ಪಕ್ಷೇತರ ಸ್ಪರ್ಧೆಗೆ ಆಗ್ರಹ
ಉದಯ ಕುಮಾರ್‌ ಶೆಟ್ಟಿ ಅವರಿಗೆ ಟಿಕೆಟ್‌ ದೊರೆಯದಿದ್ದಲ್ಲಿ ಪಕ್ಷೇತರವಾಗಿಯಾದರೂ ಅವರು ಸ್ಪರ್ಧಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next