ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಕಂಡು ಸಂತಸವಾಗಿದೆ, ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ನಾಲ್ಕು ಸಾವಿರ ಕಡಿಮೆ ಅಂತರದಿಂದ ಸೋಲು ಕಂಡಿದ್ದೇವೆ.ಈ ಬಾರಿ ಕಾಂಗ್ರೆಸ್ ಪರ ಒಲವು ಕ್ಷೇತ್ರದಲ್ಲಿದೆ. ನಮ್ಮ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ 40 ಸಾವಿರ ಮತಗಳ ಲೀಡ್ ಕ್ಷೇತ್ರದಿಂದ ಕೊಟ್ಟು ಗೆಲ್ಲಿಸಬೇಕಿದೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಕಳ ಬೈಪಾಸ್ ರಸ್ತೆಯ ಪುಲ್ಕೇರಿಯಿಂದ ಹೆಬ್ರಿ ಬಸ್ ನಿಲ್ದಾಣದವರೆಗೆ ಶುಕ್ರವಾರ ನಡೆದ ಬೃಹತ್ ವಾಹನ ರ್‍ಯಾಲಿ ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಬಡವರ್ಗಕ್ಕೆ ಅನಕೂವಾಗಿದೆ. ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಸಹಾಯಧನ, ಯುವಕರಿಗೆ 30 ಲಕ್ಷ ಉದ್ಯೋಗ, ಬಡ ಕುಟುಂಬಕ್ಕೆ 25 ಲಕ್ಷ ಜೀವವಿಮೆ ಮೊದಲಾದ ಗ್ಯಾರಂಟಿಗಳು ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಅನುಷ್ಠಾನವಾಗಲಿದೆ. ಎಂದರು. ನಮಗೆ ಒಳ್ಳೆಯ ಸಮರ್ಥ ಅಭ್ಯರ್ಥಿ ಸಿಕ್ಕಿದ್ದಾರೆ. ಸಂಸದೀಯ ಪಟುವಾಗಿ ಅನುಭವಿಗಳು. ಒಳ್ಳೆಯ ಅವಕಾಶ ಕೂಡ ನಮಗಿದೆ. ಸರಕಾರದ ಗ್ಯಾರಂಟಿ ಯೋಜನೆಗಳು, ಪ್ರತಿ ಮನೆಗೆ ಪ್ರಚಾರಕ್ಕೆ ತೆರಳುವಾಗ ಹೇಳಬೇಕಿದ್ದನ್ನು ಮತ್ತೆ ಒತ್ತಿ ಹೇಳುತ್ತಿದ್ದೇನೆ. ಯಾಕಂದರೆ ಮೈ ಮರೆಯಬಾರದು ಎನ್ನುವ ಕಾರಣಕ್ಕಾಗಿ. ಸ್ವಲ್ಪವೂ ವಿಶ್ರಮಿಸದೆ ಇಂದು ಸೇರಿದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಚಿವನಾಗಿ, ಸಂಸದನಾಗಿ ಕ್ಷೇತ್ರದ ನಾಡಿಮಿಡಿತ ಅರಿತು ಸ್ಪಂದಿಸಿದ್ದೇನೆ.ಮುಂದೆಯೂ ಅಭಿವೃದ್ದಿಯಲ್ಲಿ ನಿಮ್ಮ ಜತೆಗಿರುವೆ. ಗೆಲುವಿನ ಮಾಲೆ ತೊಡಿಸಲು ನಿಮ್ಮೆಲ್ಲರ ಸಹಕಾರ ಕೋರುವುದಾಗಿ ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಕಾಂಗ್ರೆಸ್ ಪಕ್ಷದ ಧ್ವಜ ಹಾರಿಸಿ ರ್‍ಯಾಲಿಗೆ ಚಾಲನೆ ನೀಡಿದರು.ಬ್ಲಾಕ್ ಕಾಂಗ್ರೆಸ್ ಅದ್ಯಕ ಸದಾಶಿವ ದೇವಾಡಿಗ, ಕಾಂಗ್ರೆಸ್ ಮುಖಂಡ ಡಿ. ಆರ್ ರಾಜು ಮತ್ತಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ರ್‍ಯಾಲಿಯು ಪುಲ್ಕೇರಿ ವೃತ್ತದಿಂದ ನಗರದ ಮೂಲಕ ಹೆಬ್ರಿ ಕಡೆಗೆ ಸಂಚರಿಸಿತು. ಬೃಹತ್ ಸಂಖ್ಯೆಯಲ್ಲಿ ವಾಹನಗಳು ರ್‍ಯಾಲಿಯಲ್ಲಿ ಭಾಗವಹಿಸಿದ್ದವು. ಶುಭದ ರಾವ್ ನಿರ್ವಹಿಸಿದರು.