ಹೊಸದಿಲ್ಲಿ : ಸುಮಾರು 16,000 ಕೋಟಿ ರೂ. ಲಂಚ ಹಗರಣ ನಡೆದಿದೆ ಎಂದು ಆರೋಪಿಸಲಾಗಿರುವ ರಫೇಲ್ ಫೈಟರ್ ಜೆಟ್ ವಿಮಾನಗಳ ವಿವಾದಾತ್ಮಕ ವಹಿವಾಟಿನ ಬಗ್ಗೆ ಬಹಿರಂಗ ಚರ್ಚೆ ನಡೆಯಬೇಕು; ಫ್ರಾನ್ಸ್ ಜತೆಗಿನ ಈ ವ್ಯವಹಾರದಲ್ಲಿ ನಡೆದಿರುವ ರಹಸ್ಯ ವಿದ್ಯಮಾನಗಳ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಇಂದು ಶನಿವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಆಗ್ರಹಿಸಿದೆ.
ಫ್ರಾನ್ಸ್ ಜತೆಗಿನ ರಫೇಲ್ ಫೈಟರ್ ಜೆಟ್ ವ್ಯವಹಾರವನ್ನು ಹಿಂದಿನ ಯುಪಿಎ ಸರಕಾರ ಕುದುರಿಸಿದ್ದಾಗಿನ ದರಕ್ಕಿಂತ ಮೂರು ಪಟ್ಟು ಅಧಿಕ ದರದಲ್ಲಿ ಇದೇ ವಹಿವಾಟನ್ನು ಮೋದಿ ಸರಕಾರ, ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಕಡೆಗಣಿಸಿ, ಹಿರಿಯ ಸಚಿವರನ್ನು ಕತ್ತಲಲ್ಲಿರಿಸಿ, ಶಂಕಾಸ್ಪದವಾಗಿ ಕುದುರಿಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಕೋಲ್ಕತಾದಲ್ಲಿ ಇಂದು ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು “ಹಿಂದಿನ ಯುಪಿಎ ಸರಕಾರ ಅಂತಿಮಗೊಳಿಸಿದ್ದ ದರಕ್ಕಿಂತ ಮೂರು ಪಟ್ಟ ಅಧಿಕ ದರಲ್ಲಿ ಮೋದಿ ಸರಕಾರ ರಫೇಲ್ ಫೈಟರ್ ಜೆಟ್ ಖರೀದಿ ವ್ಯವಹಾರ ನಡೆಸಿರುವುದು ಶಂಕಾಸ್ಪದವಾಗಿದೆ’ ಎಂದು ಆರೋಪಿಸಿದರು.
“ನಮ್ಮ ದೃಷ್ಟಿಯಲ್ಲಿ ಇದೊಂದು ಗಂಭೀರ ವಿಷಯವಾಗಿದೆ; ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ; ಕೂಲಂಕಷ ತನಿಖೆ ನಡೆಯುವ ಅಗತ್ಯವೂ ಇದೆ; ಆದುದರಿಂದಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದವರು ಈ ವಿಷಯವನ್ನು ಸದನದ ಒಳಗೂ ಹೊರಗೂ ಎತ್ತಿದ್ದಾರೆ’ ಎಂದು ಚಿದಂಬರಂ ಅವರು ಪಶ್ಚಿಮ ಬಂಗಾಲ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಯುಪಿಎ ಸರಕಾರ ಫ್ರಾನ್ಸ್ ಜತೆಗೆ 126 ರಫೇಲ್ ಫೈಟರ್ ಜೆಟ್‌ಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಆ ಪ್ರಕಾರ ಮೊದಲ 18 ಯುದ್ಧ ವಿಮಾನಗಳನ್ನು ಹಾರಾಟ ಸ್ಥಿತಿಯಲ್ಲಿ ಪೂರೈಸುವುದು, ಉಳಿದ 108 ವಿಮಾನಗಳನ್ನು ಬೆಂಗಳೂರಿನ ಹಿಂದುಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‌ನಲ್ಲಿ ತಂತ್ರಜ್ಞಾನ ವರ್ಗಾವಣೆ ನೆಲೆಯಲ್ಲಿ ಉತ್ಪಾದಿಸುವುದು ಒಪ್ಪಂದದ ಭಾಗವಾಗಿತ್ತು ಎಂದು ಚಿದಂಬರಂ ಹೇಳಿದರು.