ಬೆಂಗಳೂರು: ಕಮಿಷನ್ ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಿ, ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ದೂರು ನೀಡಿರುವ ಕಾಂಗ್ರೆಸ್ ನಿಯೋಗ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಈ ಪ್ರಕರಣ ಕಪ್ಪುಚುಕ್ಕೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಉತ್ತಮ ಆಡಳಿತ ನೀಡುತ್ತಾ ಬಂದಿದೆ. ಆದರೆ ಈಗ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರ ವಿರುದ್ಧ ಗುತ್ತಿಗೆದಾರರ ಸಂಘ ಧ್ವನಿ ಎತ್ತಿದೆ. ಇದಕ್ಕೆ ಬಿಜೆಪಿ, ಹಿಂದೂವಾಹಿನಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಚಿವ ಈಶ್ವರಪ್ಪ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಸಾಕ್ಷಿಯಾಗಿದೆ ಎಂದು ಆಪಾದಿಸಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡು ತನ್ನ ಸಾವಿಗೆ ಸಚಿವರೇ ಕಾರಣ ಎಂದು ಬರೆದಿಟ್ಟಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರಿಂದ 40% ಕಮಿಷನ್ ಗಾಗಿ ಸರ್ಕಾರದ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದರು. ಈ ವಿಚಾರ ಬಹಿರಂಗ ಪಡಿಸಲು 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಅಧಿವೇಶನದಲ್ಲಿ ಗೊತ್ತುವಳಿ ಮಂಡನೆ ಮಾಡಿದರೂ ಚರ್ಚೆಗೆ ಅವಕಾಶ ನೀಡದೆ ವಜಾಗೊಳಿಸಿದರು. ಬಹುಶಃ ಆ ಚರ್ಚೆ ಆಗಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಆಗುತ್ತಿರಲಿಲ್ಲ ಎಂದು ಭಾವಿಸುತ್ತೇನೆ ಎಂದರು.
ನಾವು ಎಷ್ಟೇ ಮನವಿ, ಆಗ್ರಹ ಮಾಡಿದರೂ ಸರಕಾರ ಯಾವುದೇ ತನಿಖೆ ಮಾಡಲಿಲ್ಲ. ಕ್ರಮ ಕೈಗೊಳ್ಳಲಿಲ್ಲ. ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬ ಸದಸ್ಯರು ಹಾಗೂ ಅವರ ಪತ್ನಿಯ ನೋವನ್ನು ಎಲ್ಲರೂ ನೋಡುತ್ತಿದ್ದೀರಿ. ಸಂತೋಷ್ ಬಿಜೆಪಿಯ ವರಿಷ್ಠರನ್ನು ಭೇಟಿ ಮಾಡಲು ಉಡುಪಿಗೆ ಹೋಗಿದ್ದ ಎಂದು ಮಾಧ್ಯಮಗಳ ವರದಿ ಬಂದಿವೆ. ತನಗೆ ಯಾರಿಂದಲೂ ನ್ಯಾಯ ಸಿಗುವ ಸ್ಪಂದನೆ ಇಲ್ಲದ ಕಾರಣಕ್ಕೆ ಆತ ನೊಂದು ಭ್ರಷ್ಟಾಚಾರಕ್ಕೆ ಕಾರಣರಾದ ಸಚಿವರ ಹೆಸರು ಬರೆದು ಸಾವಿಗೆ ಶರಣಾಗಿದ್ದಾನೆ ಎಂದರು.
ರಾಜ್ಯದಲ್ಲಿ ಇರುವ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆಯೇ ಹೊರತು ಹೆಚ್ಚಿನದಾಗಿ ಏನನ್ನೂ ಕೇಳುತ್ತಿಲ್ಲ. ಸಾಮಾನ್ಯ ಜನರ ಮೇಲೆ ಹೇಗೆ ಪ್ರಕರಣ ದಾಖಲಾಗಿ ಕ್ರಮ ಜರುಗಿಸಲಾಗುತ್ತದೆಯೋ ಅದೇ ರೀತಿ ಇಲ್ಲೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಸಂತೋಷ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪನವರ ಪಾತ್ರ ಕಂಡುಬಂದಿಲ್ಲ: ಸಿಟಿ ರವಿ
ಸಚಿವ ಈಶ್ವರಪ್ಪ ರಾಜ್ಯ ರಾಜಕೀಯದಲ್ಲಿ ಭ್ರಷ್ಟಾಚಾರದ ಪಿತಾಮಹ. ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅವರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳು ಸಿಕ್ಕಿದ್ದವು. ಅವರ ವಿರುದ್ಧ ಈಗ ಅವರದೇ ಪಕ್ಷದ ಕಾರ್ಯಕರ್ತ 40% ಕಮಿಷನ್ ಆರೋಪ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದ್ದು, ಎಫ್ಐಆರ್ ಆಧಾರದ ಮೇಲೆ ಅವರನ್ನು ಬಂಧಿಸಬೇಕು. ಈ ಪ್ರಕರಣದ ವಿಚಾರಣೆಯನ್ನು ಯಾರು ಮಾಡುತ್ತಾರೋ ಮಾಡಲಿ. ಆದರೆ ಆತ್ಮಹತ್ಯೆಗೆ ಪ್ರಚೋದನೆ ಜತೆಗೆ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದರು.