ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ ನಾಮಪತ್ರ ಸಲ್ಲಿಕೆ ವೇಳೆ ಪೊಲೀಸರ ನಡುವೆ ಉಂಟಾದ ಮಾತಿನ ಚಕಮಕಿ ಪರಿಣಾಮ ಎರಡೂ ಪಕ್ಷದ ಕಾರ್ಯಕರ್ತರು ಪೊಲೀಸರ ಲಾಠಿ ಏಟು ತಿಂದರು.
ಉಭಯ ನಾಯಕರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ 11ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪರ ಜೈಕಾರ ಹಾಕುತ್ತಿದ್ದರು. ಈ ಹಂತದಲ್ಲಿ ಜೆಡಿಎಸ್ ಕಾರ್ಯಕರ್ತರ ಗುಂಪು ಚಾಮರಾಜೇಂದ್ರ ವೃತ್ತದ ಸುತ್ತ ಮೆರವಣಿಗೆ ಮಾಡುತ್ತಿತ್ತು.
ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ಅಡ್ಡವಾಗಿ ಇರಿಸಿ, ನಮಗೆ ಮೆರವಣಿಗೆ ಮಾಡಲು ಅವಕಾಶ ನೀಡದೆ ಜೆಡಿಎಸ್ ಕಾರ್ಯಕರ್ತರಿಗೆ ಅವಕಾಶ ನೀಡಿದ್ದೀರಾ ಎಂದು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಈ ನಡುವೆ ಮತ್ತೂಂದು ಬದಿಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ಛೇಡಿಸಿದರು. ಇದರಿಂದ ಕುಪಿತರಾದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಭೇದಿಸಿ ರಸ್ತೆಗೆ ನುಗ್ಗಲು ಯತ್ನಿದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಕಂಗಾಲಾದ ಕಾಂಗ್ರೆಸ್ ಕಾರ್ಯಕರ್ತರು, ಸ್ಥಳದಿಂದ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಈ ಹಂತದಲ್ಲಿ ಕೆಲವರು ಆಯತಪ್ಪಿಬಿದ್ದ ಪರಿಣಾಮ 8 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಗಾಯಗಳಾದವು. ಇದಾದ ಬಳಿಕ ಜೆಡಿಎಸ್ ಕಾರ್ಯಕರ್ತರು ರಸ್ತೆಗೆ ನುಗ್ಗಲು ಮುಂದಾದರಾದರೂ, ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಿದರು.