ಜೋನಾಯ್(ಅಸ್ಸಾಂ):ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಪಕ್ಷ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಅಸ್ಸಾಂನಲ್ಲಿ ಅಕ್ರಮ ಒಳನುಸುಳುವಿಕೆ ಹೆಚ್ಚಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಜಿಯೋ 5ಜಿ ಸ್ಮಾರ್ಟ್ ಫೋನ್, ಜಿಯೋ ಬುಕ್ ಲ್ಯಾಪ್ ಟಾಪ್ ಸದ್ಯದಲ್ಲೆ ಮಾರುಕಟ್ಟೆಗೆ..?
“ನಾವು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿರು ರಾಜ್ಯದಲ್ಲಿ ಕಾಂಗ್ರೆಸ್ ಬದ್ರುದ್ದೀನ್ ಅಜ್ಮಲ್ ಜತೆ ಮೈತ್ರಿಮಾಡಿಕೊಂಡಿದೆ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗಲಿದೆ. ನಿಮಗೆ ಅಕ್ರಮವಾಗಿ ನುಸುಳುವವರನ್ನು ತಡೆಯಬೇಕೆ? ಕಾಂಗ್ರೆಸ್ ಪಕ್ಷ ಅಜ್ಮಲ್ ಜತೆ ಕೈಜೋಡಿಸಿರುವುದಕ್ಕೆ ನಾಚಿಕೆಪಡಬೇಕು ಎಂದು ಶಾ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಆಡಳಿತ ನೀಡಿದೆ. ಇದು ಕಾಂಗ್ರೆಸ್ ಆಡಳಿತಾವಧಿಯಲ್ಲಿನ ಹಿಂಸಾಚಾರ ಮತ್ತು ಅಸ್ಥಿರತೆಯ ವಿರುದ್ಧವಾಗಿದೆ ಎಂದು ಶಾ ಸೋಮವಾರ(ಮಾರ್ಚ್ 22) ಚುನಾವಣಾ ಪ್ರಚಾರ ಸಮಾರಂಭದಲ್ಲಿ ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಸ್ಸಾಂನಲ್ಲಿ ಪ್ರತಿಭಟನೆ, ಹಿಂಸಾಚಾರ, ಬಾಂಬ್ ಸ್ಫೋಟ, ಸಾವು ಮತ್ತು ಕರ್ಫ್ಯೂ ಸಾಮಾನ್ಯವಾಗಿತ್ತು. ಎಲ್ಲಾ ರೀತಿಯಿಂದಲೂ ಭಯದ ವಾತಾವರಣ ಇಲ್ಲಿ ಮನೆ ಮಾಡಿತ್ತು. ರಾಹುಲ್ ಗಾಂಧಿ ಹೇಳುತ್ತಾರೆ, ಅಸ್ಸಾಂ ಜನರ ಅಸ್ಮಿತೆ ಮತ್ತು ಅನನ್ಯತೆಯನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಇಂದು ಬಹಿರಂಗವಾಗಿ ಕೇಳುತ್ತೇನೆ, ಅಸ್ಸಾಂನಲ್ಲಿ ಕಾಂಗ್ರೆಸ್ ಇದನ್ನು ಬದ್ರುದ್ದೀನ್ ಅಜ್ಮಲ್ ತೊಡೆ ಮೇಲೆ ಕುಳಿತು ಸಾಧಿಸುತ್ತದೆಯೇ? ಎಂದು ಶಾ ಪ್ರಶ್ನಿಸಿದರು.
ಒಂದು ವೇಳೆ ಅಜ್ಮಲ್ ಅಧಿಕಾರಕ್ಕೆ ಬಂದರೆ, ಆಗ ಅಸ್ಸಾಂ ನುಸುಳುಕೋರರಿಂದ ಸುರಕ್ಷಿತವಾಗಿರಲಿದೆಯೇ? ರಾಜ್ಯದಲ್ಲಿ ಇನ್ನಷ್ಟು ನುಸುಳುಕೋರರು ಆಗಮಿಸುವುದು ನಿಮಗೆ(ಜನರಿಗೆ) ಬೇಕಾಗಿದೆಯೇ? ಎಂದು ಶಾ ಪ್ರಶ್ನಿಸಿದ್ದು, ಬಿಜೆಪಿ ಸಬ್ ಕಾ ಸಾಥ್, ಸಬ್ ವಿಕಾಸ್ ನೀತಿಯಡಿ ಕಾರ್ಯನಿರ್ವಹಿಸುತ್ತಿದೆ ಎಂದರು.