ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಕಾಂಗ್ರೆಸ್ ಭವನದಲ್ಲಿ ಸ್ವಪಕ್ಷೀಯರಿಂದಲೇ ಮುತ್ತಿಗೆಗೆ ಒಳಗಾಗಿ ಮುಜುಗರಕ್ಕೀಡಾದ ಘಟನೆ ಮಂಗಳವಾರ ನಡೆಯಿತು. ಕಾಂಗ್ರೆಸ್ ಭವನದಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಭಾಗವಹಿಸಿದ್ದ ಸಚಿವೆ ಕಾರ್ಯಕ್ರಮ ಮುಗಿದ ಬಳಿಕ ಸ್ವಲ್ಪ ಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದು, ಹೊರಡಲು ಸಿದ್ಧರಾಗುತ್ತಿದ್ದಾಗ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾದರು.
ಭಾರತ ಬಂದ್ ಸಂದರ್ಭ ಉಡುಪಿಯಲ್ಲಿ ನಡೆದ ಅಹಿತಕರ ಘಟನೆ, ಗಲಭೆ, ಬನ್ನಂಜೆಯ ಎಸ್‌ಪಿ ಕಚೇರಿ ಎದುರು ಲಾಠಿ ಚಾರ್ಜ್ ಹಿನ್ನೆಲೆಯಲ್ಲಿ ಸಚಿವೆ ಪಕ್ಷದ ಕಾರ್ಯಕರ್ತರ ನೆರವಿಗೆ ಬಂದಿಲ್ಲ. ತಮ್ಮ ನೋವು ಆಲಿಸಿಲ್ಲ ಎಂಬುದು ಸ್ವಪಕ್ಷೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಯಕರ್ತರು ಲಾಠಿ ಏಟನ್ನು ತಿಂದಾಗ ನೀವು ಅವರ ನೋವನ್ನು ಕೇಳಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನೂ ವಿಚಾರಿಸಿಲ್ಲ. ಅದಕ್ಕೆ ಬದಲು ಎಸ್ಪಿ ಮನೆಗೆ ಗಣಪತಿ ನೋಡಲು ತೆರಳಿ ಊಟ ಮಾಡಿ ಬಂದಿದ್ದೀರಿ ಎಂದು ಆರೋಪಗಳ ಸುರಿಮಳೆಗೆರೆದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಮಗೆ ನ್ಯಾಯ ಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆಗೊಳಿಸಬೇಕೆಂದು ಆಗ್ರಹಿಸಿದರು. ಕಾರ್ಯಕರ್ತರ ಆಕ್ರೋಶಕ್ಕೆ ಸಮಜಾಯಿಷಿ ನೀಡಿದ ಸಚಿವೆ, ವಿಷಯ ತಿಳಿದ ತತ್‌ಕ್ಷಣ ಘಟನೆ ಕುರಿತು ಎಸ್ಪಿಯವರಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಜಿಲ್ಲಾ ನಾಯಕರೊಂದಿಗೂ ಚರ್ಚಿಸಿದ್ದೆ ಎಂದರು.
ನಗರಸಭೆ ಸದಸ್ಯ ರಮೇಶ್ ಕಾಂಚನ್, ನಾಯಕರಾದ ವಿಶ್ವಾಸ್ ಅಮೀನ್, ಮಂಜುನಾಥ ಉಪ್ಪೂರ್, ಪ್ರಶಾಂತ ಪೂಜಾರಿ, ನಾರಾಯಣ ಕುಂದರ್, ಸದಾಶಿವ ಅಮೀನ್, ಉಪೇಂದ್ರ ಗಾಣಿಗ, ಧನಪಾಲ್ ಉಪಸ್ಥಿತರಿದ್ದರು.
ಸಚಿವೆ ಅಸಮಾಧಾನ
“ಹೀಗೆ ಮಾಧ್ಯಮದವರನ್ನು ಮುಂದಿಟ್ಟುಕೊಂಡು ನನ್ನನ್ನು ಹೆದರಿಸಲು ಬರಬೇಡಿ’ ಎಂದು ಸಚಿವೆ ಕಾರೇರಿ ತೆರಳುವ ಸಂದರ್ಭ ಕಾರ್ಯಕರ್ತರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.