Advertisement

Congress; ಬಡವರ ಬದುಕು ಹಸನು ಮಾಡಿರುವ ಗ್ಯಾರಂಟಿ ಕುರಿತು ತಪ್ಪು ಸಂದೇಶ; ಗೀತಾ ಆಕ್ರೋಶ

04:39 PM Apr 03, 2024 | Shreeram Nayak |

ಸಾಗರ: ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಈ ರೀತಿಯ ವದಂತಿಗಳಿಗೆ ಜನರು ಕಿವಿಕೊಡಕೂಡದು. ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ. ಬಡವರ ಪರ ಇರುವವರಿಗೆ ಮಾತ್ರ ಈ ಯೋಜನೆಗಳ ಮಹತ್ವ ಗೊತ್ತಾಗುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರೋಕ್ಷವಾಗಿ ವಿರೋಧಿಗಳನ್ನು ಚುಚ್ಚಿದರು.

Advertisement

ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕಿನ ಪಡವಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗದಹಳ್ಳಿ ಹಾಗೂ ಭೀಮನೇರಿಯ ಸೂರನಗದ್ದೆ ದೇವಸ್ಥಾನ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

ಗ್ರಾಮೀಣ ಕೃಪಾಂಕ ಕಲ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಶಕ್ತ ಕುಟುಂಬಗಳಿಗೆ ಆಶಾಕಿರಣ ಆಗಿದ್ದರು. ಅವರ ಮಗಳಾದ ನಾನು ಕೂಡ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗುತ್ತೇನೆ. ನೊಂದವರ ಕಣ್ಣೀರು ಒರೆಸುತ್ತೇನೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾವು ಹೆಚ್ಚಾಗಿದೆ. ಆದ್ದರಿಂದ ಇಲ್ಲಿ ಗೀತಾ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು. ಅವರಿಗೆ ರಾಜಕೀಯಕ್ಕೆ ಬರಲು ಹಕ್ಕಿದೆ. ಅವರ ರಕ್ತದಲ್ಲಿಯೇ ಸಾಮಾಜಿಕ ಸೇವೆಯ ಗುಣವಿದೆ. ಆದರೆ ಈ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಮತ ನೀಡಿ ಗೆಲ್ಲಿಸಬೇಕು.

ಸಂಸದ ಬಿ.ವೈ. ರಾಘವೇಂದ್ರ ಅವರು ಗ್ರಾಮೀಣ ಮಟ್ಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಸೋಗಾನೆ ವಿಮಾನ ನಿಲ್ದಾಣ, ಸೇತುವೆ, ರಸ್ತೆ ಮಾಡಿದರೆ ಮಾತ್ರ ಅಭಿವೃದ್ಧಿ ಅಲ್ಲ. ಬಡ ಜನರ ಅಳಲು ಆಲಿಸಬೇಕು. ಈ ಕಾರ್ಯವನ್ನು ಗೀತಾ ಅವರು ಪ್ರಮಾಣಿಕವಾಗಿ ಮಾಡಲಿದ್ದಾರೆ ಎಂದರು.

Advertisement

ನಟ ಶಿವರಾಜಕುಮಾರ್ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕಲಗೋಡು ರತ್ನಾಕರ್, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮೋಹನ್, ಅನಿತಾ ಕುಮಾರಿ, ಸೂರನಗದ್ದೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಅಣ್ಣಪ್ಪ ಇದ್ದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಜಿಲ್ಲೆಯಿಂದ ಕಣ್ಮರೆ ಆಗಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಈ ರೀತಿ ಮಾಡುವುದು ತಪ್ಪು. ಚುನಾವಣೆ ಪ್ರಚಾರ ಎಂದಾಕ್ಷಣ ಪೋಟೊ, ವಿಡಿಯೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಲ್ಲ. ಜನರ ಅಳಲು ಆಲಿಸಬೇಕು. ಈ ಕಾರ್ಯವನ್ನು ನಾನು ಮಾಡುತ್ತಿದ್ದೇನೆ.
-ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

ತಾಲೂಕಿನಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ. ಸಾಗರದಲ್ಲಿ ಮದ್ಯದಂಗಡಿ ತೆರೆದಿರುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಬೇಕಿರುವುದು ಕಣ್ಣೀರು ಒರೆಸುವ ಕೈಗಳು. ಅದನ್ನು ಮಾಡದ ಹಾಲಪ್ಪ ಮನೆ ಸೇರಿದ್ದಾರೆ!
-ಬೇಳೂರು ಗೋಪಾಲಕೃಷ್ಣ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next