ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಳೆ (ಮಾರ್ಚ್ 13)ರಂದು ಕಾರ್ಯಕಾರಿ ಸಮಿತಿ ಸಭೆಯನ್ನು ಸಂಜೆ ನಾಲ್ಕು ಗಂಟೆ ನಡೆಸಲು ನಿರ್ಧರಿಸಿದೆ.
ಮುಂಬರುವ ಲೋಕಸಭೆ ಚುನಾವಣೆ ಸೇರಿದಂತೆ ಪಕ್ಷದ ನಾಯಕತ್ವದ ವಿಚಾರವಾಗಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ, ಮಣಿಪುರ ಹಾಗೂ ಪಂಜಾಬ್ ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದ್ದು ಇದರ ಬೆನ್ನಲ್ಲೇ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಗಾಳಿಯು ಬೀಸುತ್ತಿದೆ ಇದೆಲ್ಲದರ ಕುರಿತು ನಾಳೆಯ ಸಮಿತಿ ಸಭೆ ಮಹತ್ವವನ್ನು ಪಡೆದುಕೊಳ್ಳಲಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯ ಗೆದ್ದುಕೊಂಡರೆ, ಆಮ್ ಆದ್ಮಿ ಪಾರ್ಟಿ ಹೊಸದಾಗಿ ಮತ್ತೊಂದು ರಾಜ್ಯಕ್ಕೆ ವಿಸ್ತರಣೆಯಾಗಿದೆ. ಇದರಿಂದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.
ಇದನ್ನೂ ಓದಿ : ಐಪಿಎಲ್ 2022: ಅಲೆಕ್ಸ್ ಹೇಲ್ಸ್ ಔಟ್, ಕೆಕೆಆರ್ ತಂಡ ಸೇರಿದ ಆರೊನ್ ಫಿಂಚ್
ರಾಜೀನಾಮೆ ಗುಸುಗುಸು :
ಕಾರ್ಯಕಾರಿ ಸಮ್ಮಿತಿ ಸಭೆ ನಡೆಯುವ ವಿಚಾರ ಹೊರಬೀಳುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಸುದ್ದಿ ಹರಡಲಾರಂಭಿಸಿದ್ದು ಈ ಎಲ್ಲಾ ವದಂತಿಗಳಿಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತೆರೆ ಎಳೆದಿದ್ದಾರೆ.