Advertisement

ಕಾಂಗ್ರೆಸ್‌ನ 687 ಫೇಸ್‌ಬುಕ್‌ ಪೇಜ್‌ ಡಿಲೀಟ್‌!

12:05 AM Apr 02, 2019 | mahesh |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಪ್ಯಾಮ್‌ ಮತ್ತು ನಕಲಿ ಖಾತೆಗಳ ಮೇಲೆ ಹದ್ದಿನಕಣ್ಣು ಇಟ್ಟಿರುವ ಫೇಸ್‌ಬುಕ್‌, ಈಗ ಕಾಂಗ್ರೆಸ್‌ ಮಾಹಿತಿ ತಂತ್ರಜ್ಞಾನ ವಿಭಾಗದವರಿಗೆ ಸಂಬಂಧಿಸಿದೆ ಎಂದು ಹೇಳಲಾಗಿರುವ 687 ಪೇಜ್‌ಗಳನ್ನು ಸೋಮವಾರ ಅಳಿಸಿಹಾಕಿದೆ.

Advertisement

ಈ ಖಾತೆಗಳು ಸಂಚಿತ ಜಾಲ ಹೊಂದಿದ್ದವು. ಈ ಖಾತೆ ಗಳಲ್ಲಿ ಹಂಚಿಕೊಳ್ಳುತ್ತಿದ್ದ ವಿಷಯ ಅಥವಾ ನಕಲಿ ಸುದ್ದಿಗಳಿಗಾಗಿ ಡಿಲೀಟ್‌ ಮಾಡಿದ್ದಲ್ಲ, ಈ ಖಾತೆಗಳ ವರ್ತನೆ ವಿಶ್ವಾಸಾರ್ಹ ವಾಗಿರಲಿಲ್ಲ ಮತ್ತು ಇವು ಸ್ಪ್ಯಾಮ್‌ ಅನ್ನು ಬೆಂಬಲಿಸು ತ್ತಿದ್ದವು ಎಂದು ಫೇಸ್‌ಬುಕ್‌ ಹೇಳಿದೆ. ಅಷ್ಟೇ ಅಲ್ಲ, ಪಾಕಿಸ್ಥಾನ ಸೇನೆಗೆ ಸಂಬಂಧಿಸಿದ 103 ಪೇಜ್‌ಗಳನ್ನೂ ಇದು ಅಳಿಸಿಹಾಕಿದ್ದು, ಇವೂ ಇದೇ ರೀತಿಯ ವರ್ತನೆಗಳನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತೋರುತ್ತಿದ್ದವು ಎಂದು ಫೇಸ್‌ಬುಕ್‌ ಸೈಬರ್‌ ಸೆಕ್ಯುರಿಟಿ ನೀತಿ ವಿಭಾಗದ ಮುಖ್ಯಸ್ಥೆ ನಥಾನೀಲ್‌ ಗ್ಲೀಚರ್‌ ಹೇಳಿದ್ದಾರೆ.

ತಮ್ಮ ಅಸಲಿ ಗುರುತನ್ನು ಮುಚ್ಚಿಟ್ಟು, ನಕಲಿ ಖಾತೆಗಳ ನೆಟ್‌ವರ್ಕ್‌ ಅನ್ನು ಬಳಸುತ್ತಿದ್ದಾಗ ನಾವು ಈ ರೀತಿಯ ಖಾತೆಗಳನ್ನು ಅಳಿಸುತ್ತೇವೆ. ಆದರೆ ಅದರಲ್ಲಿ ಹಂಚಿಕೊಂಡ ವಿಷಯಗಳನ್ನು ಆಧರಿಸಿ ನಾವು ಅಳಿಸುವ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಖಾತೆಗಳಲ್ಲಿ ಬಹಳಷ್ಟನ್ನು ಗುಜರಾತ್‌ ಚುನಾವಣೆ ವೇಳೆ ಸೃಷ್ಟಿಸಲಾಗಿದೆ. ಕೆಲವು ಖಾತೆಗಳಿಗೆ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ.

ನಮ್ಮ ಖಾತೆಗಳಲ್ಲ: ಕಾಂಗ್ರೆಸ್‌
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌, ಫೇಸ್‌ಬುಕ್‌ ನಮ್ಮ ಯಾವುದೇ ಅಧಿಕೃತ ಖಾತೆಗಳನ್ನು ಅಳಿಸಿಹಾಕಿಲ್ಲ ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ಹೊರಡಿಸಿರುವ ಅದು, ನಮ್ಮ ಐಟಿ ಸೆಲ್‌ ನಡೆಸು ತ್ತಿರುವ ಯಾವುದೇ ಪೇಜ್‌ಗಳನ್ನು ರದ್ದು ಮಾಡಿಲ್ಲ. ಅಷ್ಟೇ ಅಲ್ಲ, ನಮ್ಮ ಸ್ವಯಂಸೇವಕರು ನಿರ್ವಹಿಸಿ ಕೊಂಡು ಹೋಗುತ್ತಿರುವ ಪೇಜ್‌ಗಳಿಗೂ ಏನೂ ಆಗಿಲ್ಲ ಎಂದು ಹೇಳಿದೆ. ಅಳಿಸಿ ಹಾಕಲಾಗಿರುವ ಫೇಸ್‌ಬುಕ್‌ ಪೇಜ್‌ಗಳ ಪಟ್ಟಿ ಕೊಡುವಂತೆ ಕೇಳಿಕೊಂಡಿದ್ದೇವೆ ಎಂದೂ ತಿಳಿಸಿದೆ.

ಈ ಪೇಜ್‌ಗಳಲ್ಲಿ ಸ್ಥಳೀಯ ಸುದ್ದಿಗಳು ಮತ್ತು ರಾಜಕೀಯ ವಿಚಾರಗಳು, ಮುಂಬರುವ ಚುನಾವಣೆ, ಅಭ್ಯರ್ಥಿಗಳ ಬಗ್ಗೆ ಮತ್ತು ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡಲಾಗಿದೆ. ಈ ಖಾತೆಗಳು ಜಾಹೀರಾತಿಗಾಗಿ ಸುಮಾರು 26 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದವು. 2014ರ ಆಗಸ್ಟ್‌ನಿಂದ 2019ರ ಮಾರ್ಚ್‌ವರೆಗೆ ಈ ಖಾತೆಗಳಿಂದ ಜಾಹೀರಾತು ನೀಡಲಾಗಿದೆ. ಅಷ್ಟೇ ಅಲ್ಲ, ಸಿಲ್ವರ್‌ ಟಚ್‌ ಎಂಬ ಭಾರತದ ಐಟಿ ಸಂಸ್ಥೆಗೆ ಸಂಬಂಧಿಸಿದ 15 ಪೇಜ್‌ಗಳನ್ನೂ ಅಳಿಸಿ ಹಾಕಲಾಗಿದೆ.

Advertisement

ಪಾಕ್‌ ಸೇನೆ ಖಾತೆಗಳೂ ಬಂದ್‌!
ಕಾಶ್ಮೀರದ ಬಗ್ಗೆ ಪೋಸ್ಟ್‌ ಮಾಡಿ ಆಕ್ಷೇಪಾರ್ಹ ವರ್ತನೆ ತೋರುತ್ತಿದ್ದ ಪಾಕಿಸ್ಥಾನ ಸೇನೆಯ 103 ಪೇಜ್‌ಗಳನ್ನೂ ಫೇಸ್‌ಬುಕ್‌ ಡಿಲೀಟ್‌ ಮಾಡಿದೆ. ಇವುಗಳಲ್ಲಿ ಭಾರತ ಸರಕಾರ, ಭಾರತದ ರಾಜಕೀಯ ನಾಯಕರು ಮತ್ತು ಸೇನೆಯ ಬಗ್ಗೆ ಪೋಸ್ಟ್‌ ಮಾಡ ಲಾಗುತ್ತಿತ್ತು. ಈ ಖಾತೆಗಳಿಂದ ಜಾಹೀರಾತಿ ಗಾಗಿ ಸುಮಾರು 75 ಸಾವಿರ ರೂ. ವೆಚ್ಚ ಮಾಡಲಾಗಿದೆ.

ಇಂಡಿಯಾ ಐ ಪೇಜ್‌ ಡಿಲೀಟ್‌
ಕೇವಲ ಕಾಂಗ್ರೆಸ್‌ ಬೆಂಬಲಿತ ಪೇಜ್‌ಗಳಷ್ಟೇ ಅಲ್ಲ, ಬಿಜೆಪಿಯನ್ನು ಬಲವಾಗಿ ಬೆಂಬಲಿಸುತ್ತಿದ್ದ “ಇಂಡಿಯಾ ಐ’ ಎಂಬ ಫೇಸ್‌ಬುಕ್‌ ಪೇಜ್‌ ಅನ್ನೂ ಡಿಲೀಟ್‌ ಮಾಡಲಾಗಿದೆ. ಇದು ಸಿಲ್ವರ್‌ ಟೆಕ್‌ ಕಂಪೆನಿಯ ಪೇಜ್‌ ಆಗಿದೆ. ಇದೇ ಕಂಪೆನಿ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಆ್ಯಪ್‌ ಅನ್ನೂ ಅಭಿವೃದ್ಧಿ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next