ಬಳ್ಳಾರಿ: ಅನುದಾನ ಸಮರ್ಪಕ ಹಂಚಿಕೆಯಾಗಿಲ್ಲ, ನೂತನ ಸಭಾಂಗಣವನ್ನು ಉದ್ಘಾಟಿಸಿದರೂ ಸಭೆ ಏಕೆ ನಡೆಸುತ್ತಿಲ್ಲ ಎಂದು ಕಾಂಗ್ರೆಸ್‌ನ ಕೆಲ ಜಿಪಂ ಸದಸ್ಯರು ಪಟ್ಟು ಹಿಡಿದು ಸಭೆಯನ್ನು ಬೈಕಾಟ್ ಮಾಡಿದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಯಿತು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ 13ನೇ ಸಾಮಾನ್ಯ ಸಭೆಯಲ್ಲಿ ನಡಯಬೇಕಿತ್ತು. ಆದರೆ, ಸಭೆ ಆರಂಭವಾಗುತ್ತಿದ್ದಂತೆ ಜಿಪಂ ಸದಸ್ಯರಾದ ನಾರಾ ಭರತ್‌ರೆಡ್ಡಿ, ಅಲ್ಲಂ ಪ್ರಶಾಂತ್, ಎ.ಮಾನಯ್ಯ, ವಿಶ್ವನಾಥ್ ಸೇರಿ ಹಲವು ಸದಸ್ಯರು ಅನುದಾನ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಜಿಪಂನ ನೂತನ ಸಭಾಂಗಣವನ್ನು ಉದ್ಘಾಟಿಸಿದರೂ, ಅದರಲ್ಲಿ ಸಾಮಾನ್ಯ ಸಭೆ ಏಕೆ ನಡೆಸುತ್ತಿಲ್ಲ ಪ್ರಶ್ನಿಸಿದರು. ಕಳೆದ ಸಭೆಯಲ್ಲೇ ಮುಂದಿನ ಸಭೆಯನ್ನು ನೂತನ ಸಭಾಂಗಣದಲ್ಲಿ ನಡೆಸಬೇಕು ಎಂದು ತಿಳಿಸಲಾಗಿತ್ತು. ಆದರೆ, ನೂತನ ಸಭಾಂಗಣವನ್ನು ಉದ್ಘಾಟಿಸಿ ಪುನಃ ಹಳೆಯ ಸಭಾಂಗಣದಲ್ಲೇ ಸಭೆಯನ್ನು ನಡೆಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ನೂತನ ಸಭಾಂಗಣದಲ್ಲಿ ಮೈಕ್ ವ್ಯವಸ್ಥೆ ಆಗಿಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ. ಬೋರ್ಡ್ ಸಹ ಸಿದ್ದವಾಗಿಲ್ಲ. ಹಾಗಾಗಿ ಇದೊಂದು ಸಭೆಯನ್ನು ಹಳೆಯ ಸಭಾಂಗಣದಲ್ಲೇ ನಡೆಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಹಾಗಾದರೆ ಈ ಸಭೆಯನ್ನು ನಾವೆಲ್ಲರು ಬೈಕಾಟ್ ಮಾಡುತ್ತೇವೆ. ಇನ್ನೊಮ್ಮೆ ಸಭೆಗೆ ಕರೆಯುವುದಾದರೆ ಹೊಸ ಸಭಾಂಗಣದಲ್ಲೇ ಕರೆಯಿರಿ ಎಂದು ಸಭೆಯಿಂದ ಹೊರನಡೆದರು. ಸದಸ್ಯರನ್ನು ಸಮಾಧಾನ ಪಡಿಸಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ಇದರಿಂದ ಸಭೆ ನಡೆಯಲು ಬೇಕಿದ್ದ 38 ಸದಸ್ಯರ ಪೈಕಿ 32 ಸದಸ್ಯರು ಮಾತ್ರ ಸಹಿ ಮಾಡಿದ್ದು, ಕೋರಂ ಕೊರತೆಯಾಗಿದ್ದರಿಂದ ಸಭೆಯನ್ನು ಮುಂದೂಡುವುದಾಗಿ ಅಧ್ಯಕ್ಷೆ ಭಾರತಿ ತಿಮ್ಮಾರಡ್ಡಿ ಘೋಷಿಸಿದರು. ಸಭಾಂಗಣ ನಿರ್ಮಾಣಕ್ಕೆ 110 ಲಕ್ಷ ರೂ ಅನುದಾನ ಕೊರತೆ ಇತ್ತು. ಆದರೂ ಜಿಲ್ಲಾ ಕಾರಿಗಳ ಸಹಕಾರದಿಂದ ಸರ್ಕಾರದಿಂದ ಅನುದಾನ ತಂದು ಮಾಡಲಾಗಿದೆ. ಕೆಲ ಕಾಮಗಾರಿ ಬಾಕಿ ಇದೆ. ಮುಗಿದ ತಕ್ಷಣ, ಅಧ್ಯಕ್ಷರು ಹೇಳಿದಾಗ ಮತ್ತೆ ಸಭೆ ಕರೆಯಲಾಗುವುದು ಸಿಇಒ ನಂದಿನಿ ಹೇಳಿದರು. ಗೊಂದಲದಲ್ಲೇ ಆರಂಭ, ಮುಕ್ತಾಯ: ಜಿಪಂ 13ನೇ ಸಾಮಾನ್ಯ ಸಭೆಯನ್ನು ಹೇಗಾದರೂ ಮಾಡಿ ನಡೆಬೇಕು ಎಂದು ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರು ಪ್ರಯತ್ನಿಸಿದರೂ, ಕಾಂಗ್ರೆಸ್‌ನ ಕೆಲ ಸದಸ್ಯರ ಅಸಹಕಾರದಿಂದ ಸಾಧ್ಯವಾಗಲಿಲ್ಲ.
ಗೊಂದಲದಲ್ಲಿ ಸಭಾಂಗಣ ಉದ್ಘಾಟನೆ ಮತ್ತು ಸಭೆಯನ್ನು ಏಕೆ ಕರೆದಿದ್ದೀರಿ ಎಂದು ಸದಸ್ಯರೊಬ್ಬರು ಪ್ರಶ್ನಿಸಿದಾಗ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರು ನಾನು ಗೊಂದಲದಲ್ಲೇ ಅಧ್ಯಕ್ಷೆ ಆಗಿದ್ದೇನೆ. ಗೊಂದಲದಲ್ಲೇ ಅವ ಮುಗಿಸುತ್ತೇನೆ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಸಭೆಯಲ್ಲಿದ್ದ ಹಲವು ಸದಸ್ಯರು ನಕ್ಕರು.