ಬೆಂಗಳೂರು: ‘ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ನಾನು, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹಾಗೂ ಬೆಂಗಳೂರಿನ ಶಾಸಕರು ವಿಧಾನಸೌಧ ಮತ್ತು ಹೈಕೋರ್ಟ್ ಮುಂಭಾಗದಲ್ಲಿ 24 ತಾಸುಗಳ ಕಾಲ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸಿಎಂ ನಿವಾಸಕ್ಕೆ ಘೇರಾವ್ ಗೆ ಯತ್ನಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಕಾಂಗ್ರೆಸ್ ನಾಯಕರು ವಿಧಾನಸೌಧದ ಮುಂದೆ ಪ್ರತಿಭಟನೆ ಆರಂಭಿಸಿದ್ದು, ತಮ್ಮ ಹೋರಾಟದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ ಶಿವಕುಮಾರ್, ನಾಳೆಯಿಂದ ಆರಂಭವಾಗಬೇಕಿದ್ದ ಜಿಲ್ಲಾವಾರು ಪ್ರತಿಭಟನೆ ಒಂದು ದಿನ ಮುಂದೂಡಲಾಗಿದ್ದು, ಏಪ್ರಿಲ್ 16, ಶನಿವಾರದಿಂದ ಆರಂಭವಾಗಲಿದೆ. ಮುಂದಿನ ಹೋರಾಟದ ಬಗ್ಗೆ ನಂತರ ಮಾಹಿತಿ ನೀಡುತ್ತೇವೆ’ ಎಂದರು.
‘ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯವರು ಈ ಭ್ರಷ್ಟಾಚಾರ ಮುಚ್ಚಿಹಾಕಲು ಹುನ್ನಾರ ಮಾಡುತ್ತಿದ್ದು, ಇಂದು ನಾವು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವಾಗ ಪೊಲೀಸರು ನಮ್ಮನ್ನು ಬಂಧಿಸಿದರು. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಭ್ರಷ್ಟರನ್ನು ರಕ್ಷಣೆ ಮಾಡಿ ಭ್ರಷ್ಟರ ನಾಯಕರಂತೆ ವಾದ ಮಂಡಿಸುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಇಂದು ನಾವು 24 ಗಂಟೆಗಳ ಹಗಲು-ರಾತ್ರಿ ಧರಣಿ ಹಮ್ಮಿಕೊಂಡಿದ್ದು, ಶಾಸಕಾಂಗ ಹಾಗೂ ನ್ಯಾಯಾಂಗದ ಬಾಗಿಲಲ್ಲಿ ನಿಂತು ನ್ಯಾಯ ಕೇಳುತ್ತಿದ್ದೇವೆ. ನ್ಯಾಯ ಸಿಗಬೇಕು. ಈ ಸರ್ಕಾರ ಭ್ರಷ್ಟ ಸರ್ಕಾರ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಅವನಿಂದಲೇ 40% ಕಮಿಷನ್ ಸುಲಿಗೆ ಮಾಡುತ್ತಿರುವಾಗ ಬೇರೆಯವರಿಂದ ಹೇಗೆ ಸುಲಿಗೆ ಮಾಡುತ್ತಿರಬಹುದು. ಸಂತೋಷ್ ಪಾಟೀಲ್ ಅವರ ಪತ್ನಿ ಹಾಗೂ ತಾಯಿ ನಮಗೆ ಎಲ್ಲ ವಿಚಾರ ತಿಳಿಸಿದ್ದಾರೆ. ಮಾಧ್ಯಮಗಳ ಮುಂದೆ ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಅವರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಅವರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಕಿಡಿ ಕಾರಿದರು.
ಸಂತೋಷ್ ಪ್ರತಿ ಉಸಿರಿನಲ್ಲೂ ಬಿಜೆಪಿ ಎನ್ನುತ್ತಿದ್ದ, ಆದರೆ ಅದೇ ಬಿಜೆಪಿ ನನ್ನ ಪತಿಯ ಜೀವ ಬಲಿ ಪಡೆದಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಸಂತೋಷ್ ಅವರು ನಮ್ಮ ಸಮಾಜದ ಮಹಾನ್ ನಾಯಕ ಎಂದು ಯಡಿಯೂರಪ್ಪನವರು, ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನಿಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳು ಸಚಿವರ ರಕ್ಷಣೆಗೆ ನಿಂತಿದ್ದಾರೆ. ಆದರೆ ಯಡಿಯೂರಪ್ಪನವರು ಈ ವಿಚಾರದಲ್ಲಿ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ. ಇನ್ನು ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಅವರೇ ಸಂತೋಷ್ ಅವರ ತಾಯಿ ಹಾಗೂ ಪತ್ನಿಯ ಗೋಳು ಕೇಳಿ ಎಂದರು.
ಮುಖ್ಯಮಂತ್ರಿಗಳೇ ನೀವು ಕೂಡ ಅವರ ನೋವು ಕೇಳಬೇಕು. ಸಂತೋಷ್ ಸಹೋದರನ ಭೇಟಿ ಮಾಡಬೇಕು. ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು, ಅವರು ಮಾಡಿರುವ ಕಾಮಗಾರಿ ಬಿಲ್ ಪಾವತಿ ಆಗಬೇಕು. ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ಸಿಗಬೇಕು, ಅದು ಸಿಗುವವರೆಗೂ ಕಾಂಗ್ರೆಸ್ ಪಕ್ಷ ಖಾಸಗಿ ಕೆಲಸ ನೀಡಲು ಬದ್ಧವಾಗಿದೆ. ಇದು ನಮ್ಮ ಪ್ರತಿಜ್ಞೆ. ನಾವು ಅವರಿಗೆ ಅಲ್ಪ ಸಹಾಯ ಮಾಡಲು 11 ಲಕ್ಷ ಆರ್ಥಿಕ ನೆರವು ನೀಡಲು ಬದ್ಧವಾಗಿದ್ದೇವೆ ಎಂದರು.
ಲಂಚ ಹಾಗೂ ಮಂಚದವರನ್ನು ಪಕ್ಕದಲ್ಲಿ ಇಟ್ಟುಕೊಳ್ಳಲಿ
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಿಜೆಪಿ ಬೇಕಾದರೆ ಅವರಂತಹ ಮುತ್ತುರತ್ನಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಲಿ. ಇಂತಹ ಮುತ್ತುರತ್ನಗಳು ನಿಮ್ಮಲ್ಲಿದ್ದರೆನೇ ಒಳ್ಳೆಯದು. ಮಹಿಳೆಯರು ಮೂಗುತಿ ಹಾಗೂ ಓಲೆಯಲ್ಲಿ ಮುತ್ತುರತ್ನಗಳನ್ನು ಇಟ್ಟುಕೊಂಡಂತೆ ಬಿಜೆಪಿ ಲಂಚ ಹಾಗೂ ಮಂಚದವರನ್ನು ಪಕ್ಕದಲ್ಲಿ ಇಟ್ಟುಕೊಳ್ಳಲಿ ಎಂದರು.
ಈಗಾಗಲೇ ನೋಡಿದ್ದಾರಲ್ಲ
ಈ ಪ್ರಕರಣದಲ್ಲಿ ಮಹಾನಾಯಕಿ ಕೈವಾಡ ಸೋಮವಾರ ಬಿಚ್ಚಿಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, ‘ಅವರು ಏನುಬೇಕಾದರೂ ಬಿಚ್ಚಿಡಲಿ, ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಯಾರ್ಯಾರು ಏನೇನು ಬಿಚ್ಚಿದ್ದಾರೆ ಎಂಬುದನ್ನು ಜನ ಈಗಾಗಲೇ ನೋಡಿದ್ದಾರಲ್ಲ’ ಎಂದು ತಿರುಗೇಟು ನೀಡಿದರು.