Advertisement

ಹೋರಾಟಕ್ಕೆ ಜತೆಗೂಡಿದವರಿಗೆ ಅಭಿನಂದನೆ ತ್ರಿವಳಿ ತಲಾಖ್‌ ತೀರ್ಪು

08:03 AM Aug 23, 2017 | Team Udayavani |

ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿವೆ. ಹೀಗಾಗಿ ಸಂಸತ್ತಿನಲ್ಲಿ ಶಾಸನ ಮಂಜೂರಾಗಲು ವಿರೋಧ ವ್ಯಕ್ತವಾಗುವುದಿಲ್ಲ ಎಂದು ನಿರೀಕ್ಷಿಸಬಹುದು. 

Advertisement

ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್‌ ಪದ್ಧತಿಯನ್ನು ರದ್ದುಗೊಳಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯ ಮುಸ್ಲಿಂ ಮಹಿಳೆಯರ ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದಿದೆ. ಮೂರು ಸಲ ತಲಾಖ್‌ ಹೇಳಿ ವಿಚ್ಛೇದನ ನೀಡುವ ಕ್ರಮ  ಅಮಾನವೀಯ ಮಾತ್ರವಲ್ಲದೆ ಮಹಿಳೆಯರಿಗೆ ಸಂವಿಧಾನದತ್ತವಾದ ಸಮಾನತೆ ಹಾಗೂ ಇತರ ಮೂಲಭೂತ ಹಕ್ಕುಗಳನ್ನು ನಿರಾಕರಿಸಿತ್ತು. ಅನೇಕ ಮುಸ್ಲಿಂ ರಾಷ್ಟ್ರಗಳೇ ತ್ರಿವಳಿ ತಲಾಖ್‌ ಪದ್ಧತಿಯನ್ನು ರದ್ದುಗೊಳಿಸಿದ್ದರೂ ಭಾರತದಲ್ಲಿ ಮಾತ್ರ ಅದು ಧಾರ್ಮಿಕ ಆಚಾರ ಮತ್ತು ವೈಯಕ್ತಿಕ ಕಾನೂನಿನ ನೆಲೆಯಲ್ಲಿ ಆಚರಣೆಯಲ್ಲಿತ್ತು. ಇದೀಗ ಸುಪ್ರೀಂ ಕೋರ್ಟ್‌ ಈ ಪದ್ಧತಿ ಸಂವಿಧಾನ ಬಾಹಿರ ಮಾತ್ರವಲ್ಲದೆ ಇಸ್ಲಾಂ ವಿರೋಧಿ ಎಂದು
ಹೇಳುವ ಮೂಲಕ ಅದಕ್ಕಿದ್ದ ಧಾರ್ಮಿಕ ನೆಲೆಗಟ್ಟಿನ ರಕ್ಷಣೆಯನ್ನು ವಿಫ‌ಲಗೊಳಿಸಿದೆ.

ಆರು ತಿಂಗಳ ಮಟ್ಟಿಗೆ ತ್ರಿವಳಿ ತಲಾಖ್‌ ರದ್ದುಗೊಳಿಸಿರುವ ನ್ಯಾಯಾಲಯ, ಈ ಪದ್ಧತಿಯನ್ನು ಶಾಶ್ವತವಾಗಿ ನಿಷೇಧಿಸುವ ಸಲುವಾಗಿ ಆರು ತಿಂಗಳ ಒಳಗಾಗಿ ಶಾಸನ ರಚಿಸಲು ಕೇಂದ್ರಕ್ಕೆ ಆದೇಶಿಸಿದೆ. ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ಬಳಿಕವಾದರೂ ಮುಸ್ಲಿಂ ಸಹೋದರಿಯರನ್ನು ಇದರಿಂದ ಪಾರು ಮಾಡಿರುವ ಶ್ರೇಯ ನಿಸ್ಸಂಶಯವಾಗಿ ಮೋದಿ ನೇತೃತ್ವದ ಸರಕಾರಕ್ಕೆ ಸಲ್ಲಬೇಕು. ಹಿಂದಿನ ಯಾವ ಸರಕಾರಗಳಿಗೂ ಇಂತಹ ದಿಟ್ಟತನವಾಗಲಿ  ಚ್ಛಾಶಕ್ತಿಯಾಗಲಿ ಇರಲಿಲ್ಲ. ಆದರೆ ಮೋದಿ ಸರಕಾರ ತಲಾಖ್‌ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಶಾಯರಾ ಬಾನು ಹಾಗೂ ಇತರ ಮಹಿಳೆಯರ ಬೆನ್ನಿಗೆ ಗಟ್ಟಿಯಾಗಿ ನಿಂತ ಪರಿಣಾಮವಾಗಿ ಮುಸ್ಲಿಂ ಮಹಿಳೆಯರನ್ನು ತೊಂದರೆಗೀಡು ಮಾಡಬಹುದಾಗಿದ್ದ ಪದ್ಧತಿಯೊಂದು
ಕೊನೆಯಾದಂತಾಗಿದೆ.

 ದೇಶದಲ್ಲಿ ಮಹಿಳೆಯರನ್ನು ಇನ್ನೂ ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಾಣುವ ಮನೋಧರ್ಮ ಬದಲಾಗಿಲ್ಲ. ಅದರಲ್ಲೂ ಮುಸ್ಲಿಮ್‌ ಸಮುದಾಯದಲ್ಲಿ ಮಹಿಳೆಯರಿಗೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳಿವೆ. ತಲಾಖ್‌ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳು ಅವರ ಜೀವನವನ್ನು ಕಠಿಣಗೊಳಿಸಿವೆ. ಅನೇಕ ಪ್ರಕರಣಗಳಲ್ಲಿ ತಲಾಖ್‌ ಪಡೆದುಕೊಂಡವರು ಪ್ರಬುದ್ಧ ವಯಸ್ಕರೂ ಆಗಿರುವುದಿಲ್ಲ. ತಲಾಖ್‌ ನೀಡಿದ ಪುರುಷ ಸುಲಭವಾಗಿ ಇನ್ನೊಂದು ಮದುವೆಯಾಗುತ್ತಾನೆ. ಆದರೆ ಮಹಿಳೆಗೆ ಅದು ಸುಲಭವಲ್ಲ. ಈ ಮಹಿಳೆ ತನ್ನ ತವರಿನ ಮತ್ತು ಸಮಾಜದ ಋಣದಲ್ಲಿ ಬದುಕ ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ತ್ರಿವಳಿ ತಲಾಖ್‌ಗೆ ಗುರಿಯಾದ ಮಹಿಳೆಯರಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಪರಿಹಾರಗಳು ಸಿಗುತ್ತಿರಲಿಲ್ಲ. 1986ರಲ್ಲಿ ಕೇಂದ್ರ ರಚಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯಿದೆ ಪ್ರಕಾರ ತಲಾಖ್‌ ನೀಡಿದ ಬಳಿಕ ಗಂಡ ಇದ್ದತ್‌ ಅವಧಿಯಲ್ಲಿ ಮಾತ್ರ ಜೀವನಾಂಶ ನೀಡಲು ಬದ್ಧನಾಗಿದ್ದ. ಇದ್ದತ್‌ ಅವಧಿ ಹೆಚ್ಚೆಂದರೆ ಮೂರು ತಿಂಗಳು ಇರುತ್ತದೆ.

ಅನಂತರ ಆಕೆ ಸಂಬಂಧಿಕರು ಅಥವಾ ವಕ್ಫ್ ಮಂಡಳಿಯ ನೆರವಿಗಾಗಿ ಅಂಗಲಾಚಬೇಕಿತ್ತು. ಇಂಥವರಿಗೆಲ್ಲ ಸುಪ್ರೀಂ ಕೋರ್ಟ್‌ ತೀರ್ಪು ನೆಮ್ಮದಿ ನೀಡಿದೆ. ಕಾಂಗ್ರೆಸ್‌, ಬಿಜೆಪಿ, ಸಿಪಿಎಂ ಸೇರಿದಂತೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿವೆ. ಹೀಗಾಗಿ ಸಂಸತ್ತಿನಲ್ಲಿ ಶಾಸನ ಮಂಜೂರಾಗಲು ವಿರೋಧ ವ್ಯಕ್ತವಾಗುವುದಿಲ್ಲ ಎಂದು ನಿರೀಕ್ಷಿಸಬಹುದು. ಹಾಗೆಂದು ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸಿ ನ್ಯಾಯಾಲಯಗಳು ತೀರ್ಪು ನೀಡಿರುವುದು ಇದೇ ಮೊದಲಲ್ಲ. ಆದರೆ ಯಾವ ತೀರ್ಪುಗಳಿಗೂ ಈ ಪದ್ಧತಿಯನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಶಾಯರಾ ಬಾನು ಮಾತ್ರ ಪಟ್ಟು ಬಿಡದೆ ಸುಪ್ರೀಂ ಕೋರ್ಟ್‌ ತನಕ ಹೋದ ಪರಿಣಾಮವಾಗಿ ನಿರ್ಣಾಯಕವಾದ ತೀರ್ಪು ಬರಲು ಸಾಧ್ಯವಾಗಿದೆ. ಶಾಯರಾ ಬಾನು ಹಾಗೂ ಹೋರಾಟಕ್ಕೆ ಅವರ ಜತೆಗೂಡಿದವರೆಲ್ಲರೂ ಅಭಿನಂದನೆಗೆ ಅರ್ಹರು.

Advertisement
Advertisement

Udayavani is now on Telegram. Click here to join our channel and stay updated with the latest news.

Next