ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಮತ್ತೂಮ್ಮೆ ಅತಂತ್ರವಾಗಿದೆ. ಸ್ವತಂತ್ರ ಪಕ್ಷವಾಗಿ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಮೂರು ಪಕ್ಷಗಳಿಗೂ ನಿರಾಸೆ ಮೂಡಿಸಿದೆ.
ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕಟ್ಟಡದಲ್ಲಿ ನಡೆದ ಪಾಲಿಕೆಯ 65 ವಾರ್ಡ್‌ಗಳ ಮತ ಎಣಿಕೆ ಪ್ರಕ್ರಿಯೆ ಅತ್ಯಂತ ಕುತೂಹಲ ಮೂಡಿಸಿತ್ತು. ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಎಣಿಕೆ ಪ್ರಕ್ರಿಯೆ ಪ್ರತಿಯೊಂದು ಹಂತವೂ ಕಣದಲ್ಲಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಗೆಲುವಿನ ಲೆಕ್ಕಾಚಾರದೊಂದಿಗೆ ಎಣಿಕೆ ಕೇಂದ್ರದತ್ತ ಆಗಮಿಸಿದರು.
ಮೊದಲಿಗೆ ಎಲ್ಲಾ ಮತಯಂತ್ರಗಳನ್ನು ಎಣಿಕಾ ಕೇಂದ್ರಗಳಿಗೆ ಸಾಗಿಸಿದ ಸಿಬ್ಬಂದಿ, ನಂತರ ವಿದ್ಯುನ್ಮಾನ ಮತಯಂತ್ರಗಳ ವಾರ್ಡ್‌ವಾರು ಮತಗಳ ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು. ಅಂತಿಮವಾಗಿ ಪಾಲಿಕೆಯ 65 ವಾರ್ಡ್‌ಗಳಲ್ಲಿ ಬಿಜೆಪಿ-22, ಕಾಂಗ್ರೆಸ್-19, ಜೆಡಿಎಸ್-18, ಬಿಎಸ್ಪಿ-1 ಹಾಗೂ ಪಕ್ಷೇತರ -5 ಅಭ್ಯರ್ಥಿಗಳು ಗೆಲುವಿನ ನಗೆಬೀರಿದರು.
ಬೆಳಗ್ಗೆಯೇ ಬಂದಿದ್ದರೂ: ವಾರ್ಡ್‌ಗಳ ಪುನರ್ ವಿಂಗಡಣೆ, ಬದಲಾದ ಮೀಸಲಾತಿ ಕಾರಣದಿಂದ ಈ ಬಾರಿಯ ಪಾಲಿಕೆ ಚುನಾವಣೆ ಎಲ್ಲರ ಗಮನ ಸೆಳೆದಿತ್ತು. ಹೀಗಾಗಿ ಚುನಾವಣಾ ಫಲಿತಾಂಶ ಕಣದಲ್ಲಿರುವ ಅಭ್ಯರ್ಥಿಗಳಿಗಿಂತಲೂ ಅವರ ಬೆಂಬಲಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿತ್ತು. ಪರಿಣಾಮ ಹಲವು ಅಭ್ಯರ್ಥಿಗಳ ಬೆಂಬಲಿಗರು ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮೊದಲೇ ಎಣಿಕೆ ಕೇಂದ್ರದ ಸುತ್ತಮುತ್ತಲೂ ಜಮಾಯಿಸಿದ್ದರು. ಇನ್ನೂ ಕೆಲವರು ಎಣಿಕೆ ಕೇಂದ್ರದ ಸುತ್ತಮುತ್ತಲಿನ ರಸ್ತೆಗಳಲ್ಲಿ ಜಮಾಯಿಸಿ, ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದಿತು.
ಸಂಭ್ರಮಾಚರಣೆ ಜೋರು: ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡ ಕೆಲವು ಹೊತ್ತಿನ ನಂತರ ಕಣದಲ್ಲಿರುವ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗುತ್ತಾ ಸಾಗಿತು. ಈ ವೇಳೆ ಮತ ಎಣಿಕೆ ನಡೆಯುತ್ತಿದ್ದ ಮಹಾರಾಣಿ ಕಾಲೇಜಿನ ಹೊರಭಾಗದಲ್ಲಿ ಜಮಾಯಿಸಿದ್ದ ಬೆಂಬಲಿಗರು ಸಂಖ್ಯೆಯೂ ಹೆಚ್ಚಾಗಿತ್ತು. ಒಂದೊಂದೆ ವಾರ್ಡಿನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಸಂಭ್ರಮ ಕಳೆಕಟ್ಟಿತು. ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೇ ಜೋರಾಗಿ ಕೂಗುತ್ತಿದ್ದ, ಘೋಷಣೆ ಹಾಕುತ್ತಾ ಸಂಭ್ರಮಿಸಿದರು. ಪ್ರಮುಖ ಪಕ್ಷಗಳ ಬೆಂಬಲಿಗರು ತಮ್ಮ ಪಕ್ಷದ ಬಾವುಟಗಳನ್ನು ಹಾರಿಸುತ್ತಾ, ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು, ಮೆರವಣಿಗೆ ಮಾಡಿದರೆ.
ಪಟಾಕಿ ಸಿಡಿಸಿ ಸಂಭ್ರಮ: ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಪಾಲಿಕೆ ಅಖಾಡದಲ್ಲಿ ಯಾರಿಗೂ ಸ್ಪಷ್ಟಬಹುಮತ ದೊರೆಯದಿದ್ದರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿಜೇತ ಅಭ್ಯರ್ಥಿಗಳ ಸಂಭ್ರಮಕ್ಕೆ ಪಾರಾವೇ ಇಲ್ಲದಂತ್ತಾಗಿತ್ತು. ಗೆಲುವು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದಿಂದ ಸಂಭ್ರಮಾಚರಣೆಯಲ್ಲಿ ಹೊರಟ ಬೆಂಬಲಿಗರು ತಮ್ಮ ಪಕ್ಷದ ಕಚೇರಿಗಳ ಸಮೀಪ ಸಂಭ್ರಮಾಚರಣೆ ನಡೆಸಿದರು. ಜತೆಗೆ ತಾವು ಸ್ಪರ್ಧಿಸಿ ಗೆದ್ದ ವಾರ್ಡ್‌ಗಳಲ್ಲಿ ಹಾಗೂ ಪಕ್ಷದ ಪ್ರಮುಖ ನಾಯಕರ ಮನೆಗಳ ಮುಂದೆಯೂ ಪಟಾಕಿಗಳನ್ನು ಸಿಡಿಸಿ, ಸಿಹಿ ತಿನಿಸಿ, ಹೂವಿನ ಹಾರಗಳನ್ನು ಹಾಕಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು.
ಬಿಗಿ ಪೊಲೀಸ್ ಭದ್ರತೆ: ಹುಣಸೂರು ರಸ್ತೆಯ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಯಿತು. ಹೀಗಾಗಿ ಎಣಿಕೆ ಕೇಂದ್ರದ ಸುತ್ತಲೂ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ವಾಲ್ಮೀಕಿ ರಸ್ತೆ, ಹುಣಸೂರು ರಸ್ತೆ ಹಾಗೂ ಪಡುವಾರಹಳ್ಳಿ ರಸ್ತೆಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.