Advertisement

ಜನವರಿಯಲ್ಲಿ ರಾಷ್ಟ್ರಪತಿಗಳಿಗೆ ಅಭಿನಂದನೆ

10:04 AM Oct 17, 2017 | |

ಕಲಬುರಗಿ: 900 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೋಲಿ ಸಮಾಜದ ರಾಮನಾಥ ಕೋವಿಂದ ಅವರಿಗೆ ದೇಶದ ರಾಷ್ಟ್ರಪತಿ ಹುದ್ದೆ ಗೌರವ ದಕ್ಕಿದೆ. ಸಂತಸದಿಂದ, ಹೆಮ್ಮೆಯಿಂದ ಮತ್ತು ಸ್ವಾಭಿಮಾನದ ಸಂಕೇತವಾಗಿ ಅವರನ್ನು ಅಂಭಿನಂದಿಸುವ ಸಮಯ ಬಂದಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದ ಕೋಠಾರಿ ಭವನದಲ್ಲಿ ಸೋಮವಾರ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕೋಲಿ ಸಮಾಜದ
ಮುಖಂಡ ರಾಜಗೋಪಾಲರೆಡ್ಡಿ ಮುದಿರಾಜ ಅವರ ನೇತೃತ್ವದಲ್ಲಿ ಮಾತೆ ಮಾಣಿಕೇಶ್ವರಿ ಅಮ್ಮನವರ ಅಮೃತ ಮಹೋತ್ಸವ ಹಾಗೂ ಕೋವಿಂದ ಅಭಿನಂದನಾ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೋಲಿ ಸಮಾಜದ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

2018ರ ಜನವರಿಯಲ್ಲಿ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರನ್ನು ಸನ್ಮಾನಿಸುವುದು ಸೂಕ್ತ. 12ನೇ ಶತಮಾನದಲ್ಲಿ ವರ್ಗರಹಿತ ಸಮಾಜದ ನಿರ್ಮಾಣದ ವೇಳೆ ಹೇಗೆ ಅಂಬಿಗರ ಚೌಡಯ್ಯನವರನ್ನು ಬಸವಣ್ಣ ಗುರುತಿಸಿ ವೀರಗಣಾಚಾರಿ ಮಾಡಿದರೋ ಹಾಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಂದ ಅವರನ್ನು ಗುರುತಿಸಿ ಉನ್ನತ ಹುದ್ದೆಯಲ್ಲಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದ್ದರಿಂದ ಇವತ್ತು ನಾವೆಲ್ಲರೂ ಸೇರಿಕೊಂಡು ಅವರನ್ನು ಕರ್ನಾಟಕದ ಈ ಹೈಕ ನೆಲದಲ್ಲಿ ಅಭಿನಂದಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿ, ದೇಶದ 70 ವರ್ಷದ ರಾಜಕಾರಣದಲ್ಲಿ ಇದೇ ಮೊದಲ ಬಾರಿ ಕೋಲಿ ಸಮಾಜದ ವ್ಯಕ್ತಿಯೊಬ್ಬರು ರಾಷ್ಟ್ರಪತಿಗಳಾಗಿದ್ದರೆ. ಅದು ನಮ್ಮ ಭಾಗ್ಯ. ಅವರನ್ನು ಅಭಿನಂದಿಸಬೇಕು ಎನ್ನುವ ವಿಚಾರ ಒಳ್ಳೆಯದು. ಕೋವಿಂದ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಬೇಕು. ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡಿಸಬೇಕು ಎಂಬ ಕುಲಶಾಸ್ತ್ರೀಯ ಅಧ್ಯಯನ ವರದಿ ಅಪೂರ್ಣ ಹಾಗೂ ಆಧಾರ ರಹಿತವಾಗಿದ್ದರಿಂದ ತಿರಸ್ಕಾರವಾಯಿತು. ಇದನ್ನು ಕೂಲಕಂಷವಾಗಿ ಅಧ್ಯಯನ ಮಾಡಿ ಮತ್ತೆ ಸಲ್ಲಿಸಲಾಗುವುದು. ಎಸ್‌ಟಿ ಆಗುವವರೆ ನಾನು ವಿರಮಿಸುವ ಮಾತೇ ಇಲ್ಲ ಎಂದು ಹೇಳಿದರು.

ಕೋಲಿ ಸಮಾಜದ ಮುಖಂಡ ಹಾಗೂ ಕಾರ್ಯಕ್ರಮದ ರೂವಾರಿ ರಾಜಗೋಪಾಲರೆಡ್ಡಿ ಮುದಿರಾಜ ಮಾತನಾಡಿ, ಕೋವಿಂದ ಅವರು ರಾಷ್ಟ್ರಪತಿಗಳಾಗಿದ್ದು ನಮ್ಮ ಸಮಾಜಕ್ಕೆ ಒದಗಿ ಬಂದ ಸುವರ್ಣ ಯುಗ. ಅವರನ್ನು ಸನ್ಮಾನಿಸುವುದೇ ನಮ್ಮಗೆ ಹೆಮ್ಮೆಯ ವಿಚಾರ. ಸೇಡಂ ತಾಲೂಕು ಯಾನಾಗುಂದಿಯಲ್ಲಿ ಹಮ್ಮಿಕೊಳ್ಳಲಾಗುವ ಅಂಬಿಗರ ಚೌಡಯ್ಯ ಜಯಂತಿ, ಶರಣಸಾಹಿತ್ಯ ಉತ್ಸಾಹ ಮತ್ತು ಮಾತೆ ಮಾಣಿಕೇಶ್ವರಿ ಅವರ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಸನ್ಮಾನಿಸಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ನೇರವಾಗಿ ಮನವಿ ಸಲ್ಲಿಸಲಾಗುವುದು. ನನಗೆ ರಾಜಕಾರಣ ಮುಖ್ಯವಲ್ಲ. ಇದು ನನ್ನೊಬ್ಬನ ಆಶಯಕ್ಕಾಗಿ ಮಾಡಿದ ಕಾರ್ಯಕ್ರಮವಲ್ಲ. ರಾಜ್ಯದ 22 ಜಿಲ್ಲೆಯ ಸಮಾಜ ಬಂಧುಗಳು ಬಂದಿದ್ದಾರೆ. ಆದರೆ ಸಮಾಜದ ಎಸ್‌ಟಿಗೆ ಹೋಗಬೇಕು ಎನ್ನುವುದು ವಿಟಿ ಕನಸೂ ಆಗಿತ್ತು. ನನ್ನ ಧ್ಯೇಯವೂ ಅದೇ ಆಗಿದೆ. ಇದಕ್ಕಿಂತ ದೊಡ್ಡದು ನನಗೆ ಯಾವುದು ಇಲ್ಲ ಎಂದು ಹೇಳಿದರು.

Advertisement

ಬೀದರನ ಜಗನ್ನಾಥ ಜಮಾದಾರ, ವಿಜಯಪುರದ ಶರಣಪ್ಪ ಕಣಮೇಶ್ವರ, ಡಾ| ಎಸ್‌.ಕೆ. ಮೇಲಕಾರ, ಸಾಯಿಬಣ್ಣ
ಬೋರಬಂಡಾ, ಡಾ| ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿದರು. ಬಳ್ಳಾರಿಯ ದತ್ತಾತ್ರೇಯ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆ ಹಾಡಿದರು. ದೈಹಿಕ ಶಿಕ್ಷಕ ಬಸವರಾಜ ಹೇರೂರ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ಅವಟಿ ವಂದಿಸಿದರು.

ಹೊಳೆ ನರಸೀಪುರದ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ಸಿಂದಗಿ ಸಾರಂಗಮಠದ ಶಾಂತಗಂಗಾಧರ ಸ್ವಾಮಿ, ತೊನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯಾ, ಕೋಲಿ ಸಮಾಜದ ರಾಜ್ಯ ಗೌರವ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಅಂಬಿಗರ ಚೌಡಯ್ಯ ಪೀಠದ ಅಧ್ಯಕ್ಷ ಬಸವರಾಜ ಸಪ್ಪನಗೋಳ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಇಂದಿರಾ ಶಕ್ತಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಬಾಬುರಾವ ಜಮಾದಾರ, ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಪ್ರಕಾಶ ಜಮಾದಾರ,
ಮಲ್ಲಿಕಾರ್ಜುನ ಎಂ., ಕಾರವಾರದ ಮಹಾಂತೇಶ ಜಾಡರ, ಗದಗನ ಕೃಷ್ಣಮೂರ್ತಿ, ಕೊಪ್ಪಳದ ತಾಯಪ್ಪ ಕಾರಟಗಿ, ಶಿವಕುಮಾರ ನಾಟೀಕಾರ, ಉಮೇಶ ಮುದ್ನಾಳ, ಶರಣಪ್ಪ ಹದನೂರು, ರವಿರಾಜ ಕೊರವಿ ಇದ್ದರು. ರಾಜ್ಯದ 22 ಜಿಲ್ಲೆಗಳಿಂದ ಸಮಾಜದ ಬಂಧುಗಳು ಹಾಗೂ ಜಿಲ್ಲೆಯ ವಿವಿದ ಮುಖಂಡರು ಮತ್ತು ತಾಲೂಕು ಹಾಗೂ ಗ್ರಾಮಗಳ ಅಧ್ಯಕ್ಷರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next