ಕಡೂರು : ಸೋಮವಾರ ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗಣಿತ, ವಿಜ್ಞಾನದ ಮೇಷ್ಟ್ರಾಗಿ ಪಾಠ ಮಾಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ದತ್ತ ಮಾಸ್ಟರ್ ಎಂದೇ ಹೆಸರಾಗಿರುವ ವೈ.ಎಸ್.ವಿ. ದತ್ತ ಅವರು ಸುದೀರ್ಘ 40 ವರ್ಷಗಳ ಕಾಲ ಬೆಂಗಳೂರಿನಲ್ಲಿ ಮನೆ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಬೋಧಿಸಿದ ಕೀರ್ತಿ ಸಲ್ಲುತ್ತದೆ. ಕೋವಿಡ್-19 ಮಹಾಮಾರಿಯಿಂದ ಪರಿತಪಿಸುತ್ತಿದ್ದ ರಾಜ್ಯದ 10 ನೇ ತರಗತಿಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಪಾಠಗಳನ್ನು ಜಾಲತಾಣದ ಮೂಲಕ ಲೈವ್ ಪಾಠ ಹೇಳಿಕೊಟ್ಟ ದತ್ತ ಅವರಿಗೆ ಸಾವಿರಾರು ಜನರು ಕೃತಜ್ಞತೆ ಸಲ್ಲಿಸಿದ್ದಾರೆ. ಕಬ್ಬಿಣದ ಕಡೆಲೆಯಾಗಿದ್ದ ಗಣಿತದ ಸಮೀಕರಣಗಳನ್ನು ಸುಲಲಿತವಾಗಿ ಬಿಡಿಸುವುದರ ಮೂಲಕ ಮಕ್ಕಳಿಗೆ ಅರ್ಥೈಸುತ್ತಿದ್ದ ದತ್ತ ಅವರ ಪಾಠವು ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಹಕಾರವಾಗಿರುವುದಾಗಿ ಪೋಷಕರು ತಮ್ಮ ಅನಿಸಿಕೆ ಮತ್ತು ಸಂತೋಷವನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಕ್ಲಾಸ್‌ಗಳನ್ನು ಕೇಳಿದ ನನ್ನ ಮಗನಿಗೆ ಡಿಸ್ಟಿಂಕ್ಷನ್ ಬಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಿದ ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿಯ ಆಶೀರ್ವಾದ ವಿದ್ಯಾರ್ಥಿಗಳ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತೇನೆ ಎಂದು ಲೋಕೇಶ್ ಗೌಡ ಬಣ್ಣಿಸಿದ್ದಾರೆ. ರಾಜ್ಯದ ಲಕ್ಷಾಂತರ ಮಕ್ಕಳಿಗೆ ಚೈತನ್ಯ
ತುಂಬಿ ತಮ್ಮ ನಿಸ್ವಾರ್ಥ ಸೇವೆಯಿಂದ ಸ್ಫೂರ್ತಿಯಾಗಿ ಇಂದು ಸಾವಿರಾರು ಮಕ್ಕಳ ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದೀರಿ ಎಂದು ಜಾಲಹಳ್ಳಿಯ ಸೈಯದ್ ಖಲೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಸ್ಪೂರ್ತಿ ಗಣಿತದಲ್ಲಿ 100 ಅಂಕ ಪಡೆದಿರಲು ದತ್ತ ಅವರ ಪಾಠವೇ ಕಾರಣ ಎಂದು ಕೆಂಪೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ. ನಿಸ್ವಾರ್ಥ ಸೇವೆಗೆ ಖಂಡಿತವಾಗಿಯೂ ಪ್ರತಿಫಲ ಇದ್ದೇ ಇದೆ ಸರ್ ಎಂದು ವಾಣಿ ಕೆ.ಎನ್. ಶಾಸ್ತ್ರಿ ಅವರು ಅಭಿನಂದಿಸಿದ್ದಾರೆ. ಒಬ್ಬ ಶಿಕ್ಷಕನಿಗೆ ವಿದ್ಯಾರ್ಥಿಗಳ ಫಲಿತಾಂಶಕ್ಕಿಂತ ಬೇರೆ ಸಿಹಿ ಇಲ್ಲ. ನಾನು ಸಹ ಶಿಕ್ಷಕ. ಪರೋಕ್ಷವಾಗಿ ನಿಮ್ಮ ಶಿಷ್ಯ ನಿಮ್ಮ ಕಾಯಕ ಪ್ರತಿ ವರ್ಷ ಇರಲಿ. ಮುಂದಿನ ವರ್ಷ ಮತ್ತೆ ಪಾಠಕ್ಕಾಗಿ ಕಾಯುತ್ತೇವೆ ಎಂದು ಸಂತೋಷ್ ಜೋಷಿ ಕೇಳಿಕೊಂಡಿದ್ದಾರೆ.
–ಎ.ಜೆ. ಪ್ರಕಾಶಮೂರ್ತಿ