ಬೆಂಗಳೂರು: ಗುರುವಾರ ಸೇವೆಯಿಂದ ನಿವೃತ್ತರಾಗಲಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುಭಾಷ್‌ಚಂದ್ರ ಕುಂಟಿಯಾ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದ ಮುಖ್ಯಮಂತ್ರಿಗಳು ನೆನಪಿನ ಕಾಣಿಕೆ ನೀಡಿದರು. ನಂತರ ಮಾತನಾಡಿದ ಅವರು, ಕುಂಟಿಯಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೈ ಹಾಗೂ ಬಾಯಿಯನ್ನು ಶುದ್ಧವಾಗಿಟ್ಟು ಕೊಂಡು ಕೆಲಸ ಮಾಡಿದ್ದಾರೆ. ಈ ಸೇವೆಯನ್ನು ಸರ್ಕಾರ ಸ್ಮರಿಸುವುದರೊಂದಿಗೆ
ಮುಂದಿನ ದಿನಗಳಲ್ಲಿ ಅವರಿಂದ ಸಲಹೆಗಳನ್ನೂ ಪಡೆಯುವುದಾಗಿ ಹೇಳಿದರು.
ಸಾಮಾನ್ಯವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿವೃತ್ತರಾಗುವಾಗ ಸಚಿವ ಸಂಪುಟ ಸಭೆಯಲ್ಲಿ ಬೀಳ್ಕೊಡಲಾಗುತ್ತದೆ. ಆದರೆ, ಈ ವಾರ ಸಚಿವ ಸಂಪುಟ ಸಭೆ ಇಲ್ಲದ ಕಾರಣ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಕುಂಟಿಯಾ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಗುತ್ತಿದೆ ಎಂದರು.
ಸುಭಾಷ್‌ಚಂದ್ರ ಕುಂಟಿಯಾ ಮಾತನಾಡಿ, ಸಚಿವರು ಮತ್ತು ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಕೆ.ರತ್ನಪ್ರಭಾ,
ಟಿ.ಎಂ.ವಿಜಯಭಾಸ್ಕರ್ ಮತ್ತಿತರರು ಹಾಜರಿದ್ದರು.