Advertisement

ಬೆಜ್ಜ ಯಕ್ಷೋತ್ಸವದಲ್ಲಿ ಕೊರಗಪ್ಪ ನಾಯ್ಕರಿಗೆ ಸಮ್ಮಾನ 

06:00 AM Apr 06, 2018 | Team Udayavani |

ಬೆಜ್ಜ ಕಲಾ ವೇದಿಕೆಯು ಮಂಜೇಶ್ವರ ಸಮೀಪದ ಬೆಜ್ಜದ ಹಳ್ಳಿಯಂಗಳದಲ್ಲಿ ಧೂಮಾವತೀ ಬಂಟದೈವ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಕಳೆದ 26 ವರ್ಷಗಳಿಂದ ಉತ್ತಮ ಗುಣಮಟ್ಟದ ಯಕ್ಷಗಾನವನ್ನು ಯೋಜಿಸುವ ಜತೆಗೆ ಅಶಕ್ತ ಕಲಾವಿದರನ್ನು ಗುರುತಿಸಿ ಗೌರವ ಧನದೊಂದಿಗೆ ಗೌರವಿಸುತ್ತಾ ಬಂದಿದೆ. ಈ ಬಾರಿ ಎಪ್ರಿಲ್‌ 7ರಂದು ಶನಿವಾರ ಸಾಲಿಗ್ರಾಮ ಮೇಳದ “ಮಧುರಾ ಮಹೀಂದ್ರ’ ಯಕ್ಷಗಾನದ ವೇದಿಕೆಯಲ್ಲಿ ಹಿರಿಯ ಭಾಗವತರಾದ ಕೊರಗಪ್ಪ ನಾಯ್ಕರನ್ನು ಸಮ್ಮಾನಿಸಲಾಗುವುದು. 

Advertisement

ತೆಂಕುತಿಟ್ಟಿನ ಹಿರಿಯ ಭಾಗವತರಾದ ಕೊರಗಪ್ಪ ನಾಯ್ಕರು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮದ ಖಂಡೇರಿಯಲ್ಲಿ ಐತು ನಾಯ್ಕ -ಅಮ್ಮು ದಂಪತಿಗಳ ಪುತ್ರರಾಗಿ 1944, ಸೆ. 10ರಂದು ಜನಿಸಿದರು. ತನ್ನದೇ ಆದ ಶೈಲಿಯನ್ನು ರೂಢಿಸಿಕೊಂಡು ನಲ್ವತ್ತುವರ್ಷಗಳ ಸುದೀರ್ಘ‌ ಮೇಳದ ತಿರುಗಾಟವನ್ನು ನಡೆಸಿ ಮೇಳ ಹಾಗೂ ವೃತ್ತಿ ಬದ್ಧತೆಯನ್ನು ತೋರಿದವರು. ಕೇವಲ ಮೂರನೇ ತರಗತಿಯ ತನಕ ಕಲಿತು ತನ್ನ ಸುತ್ತಲಿನ ಯಕ್ಷಗಾನ ಕಲೆ ಹಾಗೂ ಕಲಾವಿದರ ಪ್ರಭಾವಕ್ಕೊಳಗಾಗಿ ಯಕ್ಷಗಾನ ಅಧ್ಯಯನಕ್ಕೆ ಮನಮಾಡಿದವರು ಹಾಗೂ ಅದಕ್ಕಾಗಿ ತಾವು ಆರಿಸಿಕೊಂಡ ಗುರುಗಳು ತೆಂಕುತಿಟ್ಟಿನ ಪ್ರಾತಿನಿಧಿಕ ಹಿರಿಯ ಮೇರು ವ್ಯಕ್ತಿಗಳಾದ ಬಲಿಪ ನಾರಾಯಣ ಭಾಗವತರು ಹಾಗೂ ನೆಡ್ಲೆ ನರಸಿಂಹ ಭಟ್ಟರು. ಹಿಮ್ಮೇಳ ಅಭ್ಯಾಸವನ್ನು ನಡೆಸಿದ ಬೆನ್ನಿಗೆ ತಿರುಗಾಟಕ್ಕೆ ಮನಮಾಡಿ ಮೂಲ್ಕಿ ಮೇಳವನ್ನು ಸೇರಿಕೊಂಡರು. ಬಳಿಕ ಎರಡು ವರ್ಷಗಳ ಧರ್ಮಸ್ಥಳ ಮೇಳದ ತಿರುಗಾಟ ಹಾಗೂ ಮುಂದೆ ಸುದೀರ್ಘ‌ 37 ವರ್ಷಗಳ ಕಾಲ ಕಟೀಲು ಮೇಳ ವೊಂದರಲ್ಲೇ ತಿರುಗಾಟ ನಡೆಸಿ ತನ್ನ ಮೇಳ ಬದ್ಧತೆಯನ್ನೂ ತೋರಿ ನಿವೃತ್ತರಾದರು.

ನಾಲ್ಕು ದಶಕಗಳ ಯಕ್ಷ ತಿರುಗಾಟದಲ್ಲಿ ಇವರು ಗಳಿಸಿದ್ದು ಅಸಂಖ್ಯಾತ ಅಭಿಮಾನಿಗಳನ್ನು. ತಾವು ಕಲಿತ ವಿದ್ಯೆಯನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸ ಬೇಕೆನ್ನುವ ಹಂಬಲದೊಂದಿಗೆ ಪೆರ್ಲ, ಧೂಮಡ್ಕ, ಮೂಡಂಬೈಲ್‌, ಆರ್ಲಪದವು, ಕಾಟುಕುಕ್ಕೆ ಮುಂತಾದ ಹತ್ತು ಹಲವು ಕಡೆಗಳಲ್ಲಿ ಹಿಮ್ಮೇಳ ಹಾಗೂ ಮುಮ್ಮೇಳ ತರಗತಿಗಳನ್ನು ನಡೆಸಿ ಅಪಾರ ಶಿಷ್ಯವರ್ಗವನ್ನೂ ಸಂಪಾದಿಸಿದ್ದಾರೆ.

ಅವರ ಕಲಾಸೇವೆಯನ್ನು ಗುರುತಿಸಿ ಕೇರಳ ತುಳು ಅಕಾಡೆಮಿ, ದಿ| ಅಳಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್‌ ವತಿಯಿಂದ ಅಳಿಕೆ ಯಕ್ಷ ಸಹಾಯ ನಿಧಿ ಹಾಗೂ ಸಮ್ಮಾನ, ಶ್ರೀಕ್ಷೇತ್ರ ವಗೆನಾಡು ಸಮ್ಮಾನ, ಶಾರದಾ ಯಕ್ಷ ಕಲಾ ಕೇಂದ್ರ ಉರ್ವ ಸ್ಟೋರ್‌ ವತಿಯಿಂದ ಸಮ್ಮಾನ ಹೀಗೆ ಹತ್ತು ಹಲವು ಸಮ್ಮಾನ ಗೌರವಾರ್ಪಣೆಗಳು ಸಂದಿವೆ. ಇತ್ತೀಚೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕಲಾ ಸೇವೆ ಹಾಗೂ ಅಶಕ್ತತೆಯನ್ನು ಮನಗಂಡು ಟ್ರಸ್ಟಿನ ಗೃಹ ನಿರ್ಮಾಣ ಯೋಜನೆಯಡಿ ಉಚಿತ ಮನೆ ನಿರ್ಮಿಸಿ ನೀಡಿದೆ. 

ಯೋಗೀಶ ರಾವ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next