Advertisement

ಚಿತ್ರಸಂತೆ ಗಾಂಧಿಗೆ ಸಮರ್ಪಣೆ: ಮಾಜಿ ಸಿಎಂ ಸಂತಸ

06:49 AM Jan 06, 2019 | Team Udayavani |

ಬೆಂಗಳೂರು: ಮಹಾತ್ಮ ಗಾಂಧೀಜಿ ಕೇವಲ ಚಿತ್ರಕಲೆ ಅಭಿಮಾನಿಯಾಗಿರದೆ, ಸ್ವತಃ ಒಬ್ಬ ಚಿತ್ರಕಲಾವಿದರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಿತ್ರಸಂತೆಯನ್ನು ಮಹಾತ್ಮನಿಗೆ ಅರ್ಪಿಸಿರುವುದು ಸಂತಸ ತಂದಿದೆ ಎಂದು ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಹೇಳಿದರು.

Advertisement

ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಗಾಂಧಿ 150-ಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸನ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಚಿತ್ರಕಲೆ ಗಾಂಧೀಜಿ ಅವರ ಆಸಕ್ತಿ ಕ್ಷೇತ್ರದಲ್ಲಿ ಒಂದಾಗಿತ್ತು. ಅವರು ಕೇವಲ ಚಿತ್ರಕಲಾಭಿಮಾನಿಯಾಗಿರದೇ ಓರ್ವ ಚಿತ್ರಕಾರರಾಗಿದ್ದರು.

ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆ ಚಿತ್ರಕಲಾ ಪರಿಷತ್ತು ಈ ಬಾರಿಯ ಚಿತ್ರಸಂತೆಯನ್ನು ಅವರಿಗೆ ಸಮರ್ಪಣೆ ಮಾಡಿರುವುದು ಸಂತಸದ ವಿಚಾರ ಎಂದರು. ಬಾಲ್ಯದಲ್ಲೇ ನನಗೆ ಮಹಾತ್ಮ ಗಾಂಧಿ ಅವರನ್ನು ನೋಡುವ ಭಾಗ್ಯ ದೊರೆಯಿತು. 1934ರಲ್ಲಿ ಅವರು ನಮ್ಮ ಊರಿನ, ಸಾರ್ವಜನಿಕ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ಶಿಕ್ಷಣ ಪಡೆಯುತ್ತಿದ್ದ, ದಲಿತ ವಿದ್ಯಾರ್ಥಿಗಳಿಬ್ಬರನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆನಂತರ 1946ರಲ್ಲಿ ದೆಹಲಿಯಲ್ಲಿ  ಮಹಾತ್ಮ ಗಾಂಧಿ ಅವರ ಬಂದೀಖಾನೆಯಲ್ಲಿ ಇದ್ದಾಗ ಸಂಜೆ ಉದ್ಯಾನಕ್ಕೆ ಬಂದು ಪ್ರಾರ್ಥನೆ ಮಾಡಿ ಆನಂತರ ಉಪದೇಶ ನೀಡುತ್ತಿದ್ದರು. ಅದನ್ನು ಕೇಳಿದ ಹೆಮ್ಮೆ ನನಗಿದೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತರು ಚಿತ್ರಕಲೆಗೆ ವಿಶೇಷ ಕೊಡುಗೆ ನೀಡಿದ್ದು, ಈ ಕೊಡುಗೆ ಮುಂದುವರಿಯಬೇಕಿದೆ. ಇನ್ನು ಚಿತ್ರಕಲಾ ಪ್ರಪಂಚದ ವ್ಯಾಪ್ತಿ ವಿಸ್ತರಿಸಬೇಕು ಎಂದು ತಿಳಿಸಿದರು. 

ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಮಾತನಾಡಿ, ತಮ್ಮ ಮನಸಾಕ್ಷಿಯಂತೆ ನಡೆದ ಮಹಾತ್ಮ ಗಾಂಧಿಯವರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ಅವಶ್ಯಕ. ಗಾಂಧೀಜಿ ಅವರ ಮಹತ್ವದ ವಿಚಾರಗಳನ್ನು ಚಿತ್ರಕಲೆಯಲ್ಲಿ ಸರಳವಾಗಿ ಮನಮುಟ್ಟುವಂತೆ ತೋರಿಸುವ ಶಕ್ತಿ ಕಲಾವಿದರಿಗೆ ಇದ್ದು, ಅಂತಹ ಸಾಕಷ್ಟು ಚಿತ್ರಗಳು ಚಿತ್ರಸಂತೆಯಲ್ಲಿವೆ. ಗಾಂಧೀಜಿಯವರ ಮನೋಧರ್ಮ ಹಾಗೂ ಸತ್ಯಶೋಧನೆಯನ್ನು ಕಲಾವಿದರು ಅದ್ಬುತವಾಗಿ ಸೆರೆಹಿಡಿದಿದ್ದಾರೆ ಎಂದರು.

Advertisement

ಇದೇ ವೇಳೆ ಹಿರಿಯ ಚಿತ್ರಕಲಾವಿದ ಜೆ.ಎಂ.ಎಸ್‌.ಮಣಿ ಅವರಿಗೆ ಎಚ್‌.ಕೆ.ಕೇಜರಿವಾಲ್ ಪ್ರಶಸ್ತಿ, ಜೆಸು ರಾವಲ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ಹಾಗೂ ನೀಲಾಪಂಚ್‌ ಅವರಿಗೆ ಎಂ.ಆರ್ಯ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್.ಶಂಕರ್‌, ಉಪಾಧ್ಯಕ್ಷ ಹರೀಶ್‌ ಜೆ.ಪದ್ಮನಾಭ, ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next