Advertisement

ಡಿಪಿಆರ್‌ ಸಲ್ಲಿಸಿದ್ದರೆ ಸಿಎಂಗೆ ಅಭಿನಂದನೆ

01:05 AM Jun 05, 2019 | Team Udayavani |

ಬೆಂಗಳೂರು: ಸಬ್‌ಅರ್ಬನ್‌ ರೈಲು ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಿದ್ದರೆ ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ಉಪನಗರ ರೈಲು ಯೋಜನೆಗೆ ಡಿಪಿಆರ್‌ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಬ್‌ಅರ್ಬನ್‌ ರೈಲು ಯೋಜನೆಗೆ ಡಿಪಿಆರ್‌ ಸಲ್ಲಿಸಿದ್ದರೆ ಸ್ವಾಗತಿಸುತ್ತೇನೆ.

ರಾಜ್ಯ ಸರ್ಕಾರ ಡಿಪಿಆರ್‌ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಮುಖ್ಯಮಂತ್ರಿಗಳಿಗೆ ಮತ್ತೂಂದು ಪತ್ರ ಬರೆದು ಸಮಗ್ರ ಮಾಹಿತಿ ಪಡೆಯುತ್ತೇನೆ. ಮೇಕೆದಾಟು, ಸಬ್‌ಅರ್ಬನ್‌ ರೈಲು ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುತ್ತೇನೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ಸದಾಶಿವನಗರದಲ್ಲಿ ಆರ್‌ಎಸ್‌ಎಸ್‌ ಪ್ರಮುಖರು ಸಂಸದರೊಂದಿಗೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಹಲವು ನಾಯಕರು ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ.

ಅನುಭವಿ ರಾಜಕಾರಣಿಯಾದ ವಿಶ್ವನಾಥ್‌ ಅವರು ಸರ್ಕಾರ ಯಾವ ರೀತಿ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಸೋಲನ್ನು ಸರಿದೂಗಿಸಿಕೊಳ್ಳಲು ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ದಾರೆ. ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರ ಕಾದಿದೆ ಎಂದು ಮಾರ್ಮಿಕವಾಗಿ ನುಡಿದರು.

Advertisement

ಮುಖ್ಯಮಂತ್ರಿಗಳ ಗ್ರಾಮ ವಾಸ್ತವದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ನಡೆಸಲಿ. ಆದರೆ ಅದಕ್ಕೂ ಮೊದಲು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಕೊಡಲಿ ಎಂದು ಹೇಳಿದರು.

ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ಎಚ್‌.ವಿಶ್ವನಾಥ್‌ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಈ ಸರ್ಕಾರದಲ್ಲಿ ಯಾರ ಇಲಾಖೆಯೂ ಕೆಲಸ ಮಾಡುತ್ತಿಲ್ಲ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಅಧ್ಯಕ್ಷರಾಗಿದ್ದರೂ ಅಧಿಕಾರವಿಲ್ಲದಂತೆ ವಿಶ್ವನಾಥ್‌ ಇದ್ದರು. ಸರ್ಕಾರ, ಜನತೆಗೆ ಗೌರವ ಬರಬೇಕೆಂದರೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ನಾವು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತೇವೆ. ಸರ್ಕಾರದಲ್ಲಿ ಬಹಳಷ್ಟು ಮಂದಿ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಸರ್ಕಾರ ಮುಂದುವರಿಯುವುದು ಸರಿಯಲ್ಲ ಎಂದು ಹೇಳಿದರು.

ಜಾತಿ ಉದ್ಧಾರ ಮಾಡಿಲ್ಲ: ಕೇಂದ್ರ ಸಂಪುಟದಲ್ಲಿ ಲಿಂಗಾಯಿತರಿಗೆ ತಾರತಮ್ಯ ತೋರಲಾಗಿದೆ ಎಂಬುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್‌ ಅವರು ಜಾತಿ ಆಧಾರದಲ್ಲಿ ರಾಜಕಾರಣ ಮಾಡುವವರು. ಲಿಂಗಾಯಿತರ ಮೇಲೆ ಅವರಿಗೆ ಕಾಳಜಿ ಇದ್ದರೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಬೆಂಬಸಲಿ ಎಂದು ಸವಾಲು ಹಾಕಿದ್ದೇನೆ. ನಾವು ಜಾತಿ ರಾಜಕಾರಣ ಮಾಡುವವರಲ್ಲ.

ನಮ್ಮದು ತತ್ವ ರಾಜಕಾರಣ. ಹಿಂದುತ್ವದ ರಾಜಕಾರಣ. ಎಚ್‌.ಡಿ.ಕುಮಾರಸ್ವಾಮಿಯವರು ಒಕ್ಕಲಿಗರಾಗಿದ್ದಾರೆ ಎಂಬ ಕಾರಣಕ್ಕೆ ಅವರು ಮುಖ್ಯಮಂತ್ರಿಯಾಗಲಿ ಎಂದು ನಾನು ಹೇಳುವುದಿಲ್ಲ. ಜಾತಿ ಹೆಸರು ಹೇಳಿದವರು ಸ್ವತಃ ಉದ್ಧಾರ ಆಗಿದ್ದಾರೆ. ಅಂಥವರು ಜಾತಿ ಉದ್ಧಾರ ಮಾಡಿಲ್ಲ ಎಂದು ಸದಾನಂದಗೌಡ ಕಿಡಿ ಕಾರಿದರು.

ಯಡಿಯೂರಪ್ಪ ಭೇಟಿಯಾದ ಬಸವರಾಜ ದಡೇಸಗೂರು: ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸಗೂರು, ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next