Advertisement

ರಾಷ್ಟ್ರ ಪ್ರಶಸ್ತಿ ಪಡೆದ ಬಾಲನಟ ಮನೋಹರ್‌ಗೆ ಅಭಿನಂದನೆ

01:30 PM Dec 23, 2017 | |

ದೊಡ್ಡಬಳ್ಳಾಪುರ: ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿ ಬಿಡುಗಡೆಯಾಗಿರುವ ರೈಲ್ವೆ ಚಿಲ್ಡ್ರನ್‌ ಚಲನಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಎರಡೂ ಪ್ರಶಸ್ತಿಗಳನ್ನು ಪಡೆದಿರುವ ಕೆ.ಮನೋಹರ್‌ ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ತೋಡಲಬಂಡೆ ಗ್ರಾಮದವರು.

Advertisement

ನಟಿಸಿದ ಚೊಚ್ಚಲ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಗಳಿಸಿ, ವೃತ್ತಿನಟರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಮನೋಹರ್‌ ದೊಡ್ಡಬಳ್ಳಾಪುರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಈ ವರ್ಷ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತನ ತಂದೆ, ತಾಯಿ ಕೃಷಿ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕಾಗಿ ಬೆಂಗಳೂರು ರಸ್ತೆಯ ಮಾರಸಂದ್ರ ಸಮೀಪದ ರೈತರೊಬ್ಬರ ದ್ರಾಕ್ಷಿ ತೋಟದಲ್ಲಿ ವಾಸವಾಗಿದ್ದಾರೆ. 

ಹಲವು ಪ್ರಶಸ್ತಿ: ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಬಾಲನಟ ಪ್ರಶಸ್ತಿ ಕೆ.ಮನೋಹರ್‌, ರಾಜ್ಯ ಮಟ್ಟದ 2ನೇ ಅತ್ಯುತ್ತಮ ಚಿತ್ರ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2017, ಏಷಿಯನ್‌ ಚಲನಚಿತ್ರೋತ್ಸವ-2017 ಹಾಗೂ ಭಾರತೀಯ ಪನೋರಮಾದಲ್ಲಿ ಪ್ರದರ್ಶನ ಗೊಂಡು ಮೆಚ್ಚುಗೆ ಗಳಿಸಿದೆ. ಗೋಲ್ಡನ್‌ ಗೇಟ್‌ ವೇ ಪ್ರಶಸ್ತಿ, ಗೋವಾದಲ್ಲಿ ಯುನೆಸ್ಕೋ ಗಾಂಧಿ ಪುರಸ್ಕಾರ ಪ್ರಶಸ್ತಿಗಳನ್ನು ಗಳಿಸಿದೆ. ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ರೈಲ್ವೆ ಚಿಲ್ಡ್ರನ್‌ ಚಲನಚಿತ್ರ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದಿಂದ ಬಾಲನಟ ಕೆ.ಮನೋಹರ್‌ ನನ್ನು ಅಭಿನಂದಿಸಲಾಯಿತು. 

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌, ಸದಭಿರುಚಿಯ ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು. ಚಟಕ್ಕೆ ದಾಸರಾಗಿ ತಮ್ಮ ಬದುಕನ್ನು ಅವನತಿಮಾಡಿಕೊಳ್ಳುವ ಮಕ್ಕಳ ಬದುಕನ್ನು ಚಿತ್ರಿಸಿರುವ ರೈಲ್ವೆ ಚಿಲ್ಡ್ರನ್‌ ಚಿತ್ರಕ್ಕೆ ಉತ್ತೇಜನ ಇಲ್ಲದಿರುವುದು ವಿಷಾದಕರ. ಸರ್ಕಾರ ಈ ಮೊದಲು ಪ್ರಶಸ್ತಿ ಪಡೆದ ಚಿತ್ರಗಳಿಗೆ ಶೇ.100 ತೆರಿಗೆ ವಿನಾಯಿತಿ ನೀಡುತ್ತಿತ್ತು. ಈಗ ಚಿತ್ರಮಂದಿರದ ದರಗಳು ಸಹ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಇಂತಹ ಚಿತ್ರಗಳ ಪ್ರವೇಶ ದರವನ್ನು ಕಡಿಮೆ ಮಾಡಬೇಕು. ಶಿಕ್ಷಣ ಇಲಾಖೆ ಮಕ್ಕಳಿಗೆ ಇಂತಹ ಚಿತ್ರಗಳನ್ನು ನೋಡುವ ವ್ಯವಸ್ಥೆ ಮಾಡಬೇಕು ಎಂದರು.

ನಿರ್ದೇಶಕರಿಗೆ ಕೃತಜ್ಞತೆ: ಪ್ರಶಸ್ತಿ ಬಂದಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಕೆ.ಮನೋಹರ್‌, ಚಲನಚಿತ್ರದಲ್ಲಿ ನಟಿಸುವುದು ಅಂದರೆ ಏನು ಎನ್ನುವುದನ್ನೇ ತಿಳಿಯದ ನನ್ನನ್ನು ಶಾಲೆಯಲ್ಲಿ ಓದುವಾಗ ಬಂದು ಗುರುತಿಸಿ ಆಯ್ಕೆ ಮಾಡಿಕೊಂಡು ಅಭಿನಯಿಸಲು ಅವಕಾಶ ಮಾಡಿಕೊಟ್ಟ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರಿಗೆ ಕೃತಜ್ಞನಾಗಿದ್ದೇನೆ. 

Advertisement

ಓದುವುದರೊಂದಿಗೆ ಅವಕಾಶ ದೊರೆತರೆ ನಟನೆಂಯನ್ನು ಮಾಡುತ್ತೇನೆ. ಪೊಲೀಸ್‌ ಇಲಾಖೆಗೆ ಸೇರಬೇಕು ಎನ್ನುವುದು ನನ್ನ ಗುರಿಯಾಗಿದೆ. ರೈಲ್ವೆ ಚಿಲ್ಡ್ರನ್‌ ಚಲನಚಿತ್ರದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಬಂದಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಕೆ.ಮನೋಹರ್‌ ಅವರ ಪೋಷಕರು ಹಾಗೂ ಗ್ರಾಮಸ್ಥರು ಚಿತ್ರ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next