ಪುತ್ತೂರು: ಕೆಲವು ದಿನಗಳಿಂದ ಪುತ್ತೂರು ಉಪ ನೋಂದಣಿ ಕಚೇರಿಯಲ್ಲಿ ಜನದಟ್ಟಣೆ ಕಾಣಿಸಿಕೊಂಡಿದೆ. ನೋಂದಣಿಗೆ ಸಂಬಂಧಿಸಿದ ಪ್ರಕ್ರಿಯೆಗಳು ನಿಧಾನ ಗತಿಯಲ್ಲಿ ನಡೆಯುತ್ತಿವೆ ಎನ್ನುವ ಆರೋಪ ಸಾರ್ವಜನಿಕ ಕಡೆಯಿಂದ ಬಂದರೆ, ಈಗ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎನ್ನುವ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
ಈ ತಿಂಗಳ ಆರಂಭದಿಂದಲೇ ನೋಂದಣಿಗೆ ಸಂಬಂಧಿಸಿದ ಸಾಫ್ಟ್ ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿ ಕೊಂಡು ಕಚೇರಿಯಲ್ಲಿ ವಿವಾಹ ಮತ್ತು ಭೂ ದಾಖಲೆಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ಸಮಸ್ಯೆ ಉಂಟಾಗಿತ್ತು. ಅನಂತರ ಉಪ ನೋಂದಣಾಧಿಕಾರಿ ಬೆಂಗಳೂರು ಮುಖ್ಯ ಕಚೇರಿಗೆ ತೆರಳಿ ಅದನ್ನು ಸರಿಪಡಿಸಿಕೊಂಡು ಬಂದಿದ್ದರು. ಈ ಮಧ್ಯೆ ಸುಮಾರು ಎರಡು ವಾರಗಳ ಕಾಲ ನೋಂದಣಿ ಪ್ರಕ್ರಿಯೆಗಳಿಗೆ ಹಿನ್ನಡೆಯಾಗಿತ್ತು. ಸಾರ್ವಜನಿಕರಿಗೂ ತೊಂದರೆಯಾಗಿತ್ತು.
ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿಯೊಂದಿಗೆ ಅಗ್ರಿಮೆಂಟ್ ರಿಜಿಸ್ಟ್ರೇಶನ್, ಮನೆ ಮಾರಾಟ ನೋಂದಣಿ ಸಹಿತ ಭೂಮಿಗೆ ಸಂಬಂಧಿಸಿದ ಎಲ್ಲ ರೀತಿಯ ನೋಂದಣಿ ಪ್ರಕ್ರಿಯೆಗಳು ನಡೆಯುತ್ತವೆ. ಜನರಿಗೆ ಅತಿ ಅಗತ್ಯದ ಕಚೇರಿ ಇದಾಗಿರುವುದರಿಂದ ಜನ ದಟ್ಟಣೆಯೂ ಉಂಟಾಗುತ್ತದೆ. ಪ್ರಸ್ತುತ ಎಲ್ಲ ಸರಕಾರಿ ಕಚೇರಿಗಳಲ್ಲಿ ಇರುವಂತೆ ಸರ್ವರ್ ನಿಧಾನಗತಿಯಲ್ಲಿಯೂ ಇದೆ. ಜತೆಗೆ ನೋಂದಣಿ ಸ್ಥಗಿತಗೊಂಡ ದಿನಗಳ ಕೆಲಸವನ್ನೂ ಮುಗಿಸ ಬೇಕಾಗಿದ್ದರಿಂದ ಒಂದಷ್ಟು ಜನದಟ್ಟಣೆ ಉಂಟಾಗಿದೆ ಎನ್ನುವುದು ಅಧಿಕಾರಿಗಳ ಸಮಜಾಯಿಷಿ.
ದಲ್ಲಾಳಿಗಳ ಹಾವಳಿಯೂ ಕಾರಣ
ಉಪನೋಂದಣಿ ಕಚೇರಿಯಲ್ಲಿ ಜಮೀನು ಸಹಿತ ಇತರ ನೋಂದಣಿ ಗಳನ್ನು ಮಾಡಿಸಿಕೊಡುವ ಬ್ರೋಕರ್‌ಗಳ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಬ್ರೋಕರ್ ಮೂಲಕ ಬಂದ ಅರ್ಜಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ನೇರವಾಗಿ ಬರುವ ಸಾರ್ವಜನಿಕರು ಗಂಟೆಗಟ್ಟಲೆ, ದಿನಗಟ್ಟಲೆ ಕಾಯುವಂತಾಗುತ್ತಿದೆ ಎನ್ನುವ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಸರಕಾರಿ ಆಸ್ಪತ್ರೆಯ ಬಳಿ ಪ್ರತ್ಯೇಕವಾಗಿದ್ದ ಉಪ ನೋಂದಣಾ ಧಿಕಾರಿ ಕಚೇರಿಯನ್ನು ಪಾರದರ್ಶಕ ಸೇವೆಯ ದೃಷ್ಟಿಯಿಂದ ಎಲ್ಲ ಕಚೇರಿ ಗಳಿರುವ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎನ್ನುವ ಸಾರ್ವಜನಿಕ ಆಗ್ರಹದೊಂದಿಗೆ ಕೆಲವು ವರ್ಷಗಳ ಹೊಯ್ದಾಟದ ಬಳಿಕ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಉಪನೋಂದಣಿ ಕಚೇರಿಯ ತಾಂತ್ರಿಕ ಹಾಗೂ ಸೇವೆಯ ತೊಡಕುಗಳು ಇನ್ನೂ ಸಮರ್ಪಕಗೊಂಡಿಲ್ಲ ಎನ್ನುವ ಆರೋಪಗಳೂ ಇವೆ. ಕಚೇರಿಯಲ್ಲಿ ಪಾರದರ್ಶಕ ಸೇವೆಗೆ ಗಮನ ಹರಿಸಬೇಕು ಎಂದು ಇತ್ತೀಚೆಗೆ ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿಯೂ ಮನವಿಯ ಮೂಲಕ ಆಗ್ರಹಿಸಿತ್ತು.
ತೊಡಕಿಲ್ಲ
ತಾಂತ್ರಿಕ ಸಮಸ್ಯೆಯಿಂದ ಒಂದಷ್ಟು ದಿನ ನೋಂದಣಿ ಪ್ರಕ್ರಿಯೆಗಳು ಸ್ಥಗಿತಗೊಂಡ ಕಾರಣ ಸರಿಯಾದ ಬಳಿಕ ಒಂದಷ್ಟು ಜನದಟ್ಟಣೆ ಇತ್ತು. ಈಗ ಎಲ್ಲ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿವೆ. ಕೆಲವೊಮ್ಮೆ ಸರ್ವರ್ ನಿಧಾನ ಇರುವುದು ಬಿಟ್ಟರೆ ಯಾವುದೇ ತೊಡಕು ಇಲ್ಲ.
– ಶಶಿಧರ್ ಗಂಟಿ, ಉಪನೋಂದಣಾಧಿಕಾರಿ, ಪುತ್ತೂರು