Advertisement

15 lakh ಪ್ರತಿಯೊಬ್ಬರ ಖಾತೆಗೆ; ವಿಧಾನಸಭಾ ಕಲಾಪದಲ್ಲಿ ತೀವ್ರ ಕೋಲಾಹಲ

05:47 PM Jul 13, 2023 | Team Udayavani |

ವಿಧಾನಸಭೆ: ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂಬ ಆರೋಪಕ್ಕೆ ಪುರಾವೆ ನೀಡುವಂತೆ ಆಡಳಿತಾರೂಢ ಕಾಂಗ್ರೆಸ್‌ಗೆ ಬಿಜೆಪಿ ಒತ್ತಾಯಿಸುವುದರೊಂದಿಗೆ ಕರ್ನಾಟಕ ವಿಧಾನಸಭೆಯಲ್ಲಿ ಗುರುವಾರ ತೀವ್ರ ಮಾತಿನ ಚಕಮಕಿ ನಡೆಯಿತು.

Advertisement

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ನವಲಗುಂದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ಮಧ್ಯಪ್ರವೇಶಿಸಿದ ಸಂದರ್ಭದಲ್ಲಿ 15 ಲಕ್ಷ ರೂ. ವಿಷಯ ಪ್ರಸ್ತಾಪಿಸಿ, ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ನಮ್ಮ ಸರ್ಕಾರ ಅದನ್ನು ಈಡೇರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ನಾವು ನಮ್ಮ ಭರವಸೆಗಳಿಗೆ ಬದ್ಧರಾಗಿದ್ದೇವೆ, ಆದರೆ ನೀವು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವ ಭರವಸೆ ನೀಡಿದ್ದೀರಿ, ಆದರೆ ನೀವು ಒಂದೇ ಒಂದು ಬ್ಯಾಂಕ್ ಖಾತೆಗೆ ಹಣ ಹಾಕಿಲ್ಲ. ಯುವಕರಿಗೆ 2 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದೀರಿ, ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನೂ ನೀಡಿದ್ದೀರಿ ಅದನ್ನೂ ಮಾಡಿಲ್ಲ ಎಂದರು.

ಕೋನರೆಡ್ಡಿ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ”ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂಬುದಕ್ಕೆ ಕನಿಷ್ಠ ಒಂದು ಸಾಕ್ಷ್ಯ ಅಥವಾ ವಿಡಿಯೋ ತುಣುಕನ್ನಾದರೂ ಕೊಡಿ ಎಂದರು.ಕೋನರೆಡ್ಡಿ ಏಕೆ ಬೋಗಸ್ ಮತ್ತು ಸುಳ್ಳು ವಿಷಯಗಳನ್ನು ಮಾತನಾಡುತ್ತಿದ್ದಾರೆ? ಆಗ ಪ್ರಧಾನಿಯವರು ಮಾತನಾಡಿದ್ದು, ಈ ದೇಶವನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಕೆಲವು ಶ್ರೀಮಂತರು ಮತ್ತು ರಾಜಕಾರಣಿಗಳು ಠೇವಣಿ ಇಟ್ಟಿರುವ ಕಪ್ಪುಹಣದ ಬಗ್ಗೆ ಮತ್ತು ಅವುಗಳನ್ನು ಮರಳಿ ಪಡೆಯುವ ಬಗ್ಗೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ ಮೋದಿ ಭಾಷಣದ ಕನಿಷ್ಠ ಒಂದು ವಿಡಿಯೋ ಕ್ಲಿಪ್ಪಿಂಗ್ ಅನ್ನು ಅವರು ತೋರಿಸಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಒಂದು ವೇಳೆ ಪ್ರಧಾನಿಯವರು ಇಂತಹ ಹೇಳಿಕೆ ನೀಡಿದ್ದರೆ ಕ್ಷಮೆಯಾಚಿಸಲು ಸಿದ್ಧ ಎಂದು ಯತ್ನಾಳ್ ಹೇಳಿದರು, ಆದರೆ ಸತ್ಯವೆಂದರೆ ಅಂತಹ ಭರವಸೆಯನ್ನು ಎಂದಿಗೂ ನೀಡಲಾಗಿಲ್ಲ ಮತ್ತು ಅನಗತ್ಯವಾಗಿ 15 ಲಕ್ಷ ರೂಪಾಯಿಗಳ ಬಗ್ಗೆ ಮಾತನಾಡುವುದು ಕಾಂಗ್ರೆಸ್‌ನವರಿಗೆ ಕೆಲಸವಾಗಿದೆ ಎಂದರು.

ವಾಕ್ಸಮರ ಮುಂದುವರಿದಾಗ ಸ್ಪೀಕರ್ ಯುಟಿ ಖಾದರ್ ಎರಡೂ ಕಡೆಯ ಶಾಸಕರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್, ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತರುವುದಾಗಿ ಪ್ರಧಾನಿ ಭರವಸೆ ನೀಡಿದ್ದರು, ಹಣ ಬಂದಿದೆಯೇ? ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಯತ್ನಾಳ್, ಕಪ್ಪುಹಣ ತರುವ ಬಗ್ಗೆ ಮಾತನಾಡಿದ್ದ ಪ್ರಧಾನಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಎಂದಾದರೂ ಹೇಳಿದ್ದಾರಾ? “ ಗ್ಯಾರಂಟಿಗಳು ಎಲ್ಲರಿಗೂ ಉಚಿತ ಎಂದು ನೀವು ಭರವಸೆ ನೀಡಿದ್ದೀರಿ, ಆದರೆ ಈಗ ಷರತ್ತುಗಳನ್ನು ಹಾಕಿದ್ದೀರಿ ಎಂದರು.

Advertisement

ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ’15 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ಕಾಂಗ್ರೆಸ್ ಸದಸ್ಯರು ಸಾಬೀತುಪಡಿಸಬೇಕು. ಅವರ ಟೀಕೆಗಳನ್ನು ಸಭಾಪತಿ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಅನಗತ್ಯವಾಗಿ ಪದೇ ಪದೇ ಇಂತಹ ಸುಳ್ಳು ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಸಚಿವ ಕೆ.ಎನ್.ರಾಜಣ್ಣ ಮತ್ತು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಮಾತನಾಡಿ, ಪ್ರಧಾನಿಯವರು ಇಂತಹ ಭರವಸೆಗಳನ್ನು ನೀಡಿದ್ದು, ಅದನ್ನು ಈಡೇರಿಸಿಲ್ಲ ಎಂಬುದು ಇಡೀ ದೇಶಕ್ಕೆ ತಿಳಿದಿದೆ ಎಂದರು. ಬಿಜೆಪಿ ಸದಸ್ಯರು ಸಾಕ್ಷ್ಯಕ್ಕಾಗಿ ಒತ್ತಾಯಿಸುವುದನ್ನು ಮುಂದುವರಿಸಿದ್ದರಿಂದ ವಿಧಾನಸಭೆಯಲ್ಲಿ ತೀವ್ರ ಗೊಂದಲ ಉಂಟಾಯಿತು. ಸ್ಪೀಕರ್ ಖಾದರ್ ಅವರು ಸತತ ಪ್ರಯತ್ನದ ನಂತರ ಸದಸ್ಯರನ್ನು ತಣ್ಣಗಾಗಿಸಿ ಸದನದ ಕಲಾಪ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next