Advertisement

ವಾರ ಕಳೆದರೂ ಜಿಎಸ್‌ಟಿ ಬಗ್ಗೆ ಮುಗಿಯದ ಗೊಂದಲ

03:55 AM Jul 08, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ ವಾರ ಕಳೆಯುತ್ತಿದ್ದರೂ ಸಾರ್ವಜನಿಕರು ಮಾತ್ರವಲ್ಲದೇ ವ್ಯಾಪಾರಿಗಳು, ಉದ್ಯಮಿಗಳ ಗೊಂದಲಗಳಿಗೆ ತೆರೆ ಬಿದ್ದಿಲ್ಲ. ಸಂಘಟಿತ ವಲಯವು ಕೆಲ ಮಾರ್ಪಾಡುಗಳೊಂದಿಗೆ ಎಂದಿನಂತೆ ವ್ಯವಹಾರ ಮುಂದುವರಿಸಿದ್ದರೆ ಅಸಂಘಟಿತ ವಲಯದವರು ಸ್ಪಷ್ಟತೆಯಿಲ್ಲದೆ ಅತಂತ್ರಕ್ಕೆ ಸಿಲುಕಿದಂತಾಗಿದೆ.

Advertisement

“ಒಂದು ದೇಶ- ಒಂದು ತೆರಿಗೆ’ ಪರಿಕಲ್ಪನೆಯಡಿ ಜೂನ್‌ 30ರ ಮಧ್ಯರಾತ್ರಿ ಜಾರಿಯಾದ ಜಿಎಸ್‌ಟಿ ಬಗ್ಗೆ ಆರಂಭದ ದಿನಗಳಲ್ಲಿ ಅನುಷ್ಠಾನ ಯಶಸ್ವಿಯಾದಂತೆ ಕಂಡುಬಂದರೂ ನಂತರದ ದಿನಗಳಲ್ಲಿ ಗೊಂದಲ, ಅಸ್ಪಷ್ಟತೆ ಹೆಚ್ಚಾಗುತ್ತಿರುವುದು ವ್ಯಕ್ತವಾಗುತ್ತಿದೆ. ಸರಕು- ಸೇವೆಗಳ ವರ್ಗೀಕರಣ ಹಾಗೂ ಅದಕ್ಕೆ ಜಿಎಸ್‌ಟಿಯಡಿ ವಿಧಿಸಬೇಕಾದ ತೆರಿಗೆ ಪ್ರಮಾಣದ ಬಗ್ಗೆಯೇ ಗೊಂದಲ ಮೂಡಿರುವುದರಿಂದ ವ್ಯಾಪಾರಿಗಳಲ್ಲಿ ಅಸ್ಪಷ್ಟತೆ ಮುಂದುವರಿದಿದೆ. ಅದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀರಲಾಂಭಿಸಿದೆ.

ಅಸಂಘಟಿತ ವಲಯಕ್ಕೆ ಹೊಡೆತ
ಜಿಎಸ್‌ಟಿ ಬಗ್ಗೆ ಗ್ರಾಹಕರಿಗೆ ಮಾತ್ರವಲ್ಲದೇ ವ್ಯಾಪಾರಿಗಳು, ವಿತರಕರು, ಉದ್ಯಮಿಗಳಲ್ಲೂ ಗೊಂದಲವಿರುವುದು ನಿಜ. ಕೆಲ ಸರಕು, ಸೇವೆಗಳ ವಿಂಗಡಣೆ, ವರ್ಗೀಕರಣ, ತೆರಿಗೆ ಪ್ರಮಾಣದ ಬಗ್ಗೆ ಸ್ಪಷ್ಟತೆಯಿಲ್ಲ. ಇದರಿಂದಾಗಿ ವ್ಯಾಪಾರ- ವಹಿವಾಟಿನಲ್ಲೂ ವ್ಯತ್ಯಯವಾಗುತ್ತಿದ್ದು, ಬೆಲೆಗಳಲ್ಲೂ ಏರುಪೇರುಗಳಾಗುತ್ತಿವೆ. ಜಿಎಸ್‌ಟಿ ಬಗ್ಗೆ ಸ್ಪಷ್ಟತೆ ಮೂಡಲು ಇನ್ನೂ ಒಂದೆರಡು ತಿಂಗಳು ಅಗತ್ಯವಿದ್ದು, ನಂತರ ವ್ಯವಹಾರ ಸುಗಮವಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ಅಧ್ಯಕ್ಷ ಕೆ.ರವಿ ತಿಳಿಸಿದರು.

“ಜಿಎಸ್‌ಟಿ ಜಾರಿ ನಂತರದ ಸ್ಥಿತಿಗತಿಯನ್ನು ಅವಲೋಕಿಸಿದರೆ ಸಂಘಟಿತ ವಲಯದ ವ್ಯವಹಾರ ಸುಗಮವಾಗಿ ನಡೆಯುತ್ತಿದ್ದು, ಅಸಂಘಟಿತ ವಲಯದ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಕಂಡುಬಂದಿದೆ. ಜೆಎಸ್‌ಟಿ ಅನುಷ್ಠಾನದ ಬಗ್ಗೆಯೇ ಗೊಂದಲ ನಿವಾರಣೆಯಾಗದಿದ್ದರೆ ಲೆಕ್ಕಪತ್ರವನ್ನು (ರಿಟರ್ನ್ಸ್) ಸಲ್ಲಿಸುವುದು ಕೂಡ ಇನ್ನಷ್ಟು ಸವಾಲಾಗಲಿದೆ. ಅರಿವು ಹೆಚ್ಚಾದಂತೆ ಗೊಂದಲಗಳು ನಿವಾರಣೆಯಾಗಲಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ’ ಎಂದು ಹೇಳಿದರು.

ಜಾಗೃತಿ- ಸ್ಪಂದನೆ ಮುಂದುವರಿಕೆ
ಜಿಎಸ್‌ಟಿ ಜಾರಿ, ತೆರಿಗೆ ಬಗ್ಗೆ ಮಾಹಿತಿ ನೀಡುವ ಹಾಗೂ ವ್ಯಾಟ್‌ನಿಂದ ಜಿಎಸ್‌ಟಿಗೆ ವ್ಯವಹಾರವನ್ನು ವರ್ಗಾಯಿಸಿಕೊಳ್ಳಲು ಅಗತ್ಯ ನೆರವನ್ನು ಎಫ್ಕೆಸಿಸಿಐ ವತಿಯಿಂದ ಮುಂದುವರಿಸಲಾಗುವುದು. ವಾಣಿಜ್ಯ ತೆರಿಗೆ ಇಲಾಖೆ, ಕೇಂದ್ರ ಅಬಕಾರಿ ಇಲಾಖೆ, ತಾಂತ್ರಿಕ ನೈಪುಣ್ಯ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರಗಳು ಮುಂದುವರಿಯಲಿವೆ ಎಂದು ತಿಳಿಸಿದರು.

Advertisement

ಕಾಸಿಯಾದಿಂದಲೂ ಕಾರ್ಯಾಗಾರ
ಸಣ್ಣ ಕೈಗಾರಿಕೆಗಳ ಮಾಲೀಕರಲ್ಲೂ ಜಿಎಸ್‌ಟಿ ಬಗ್ಗೆ ಗೊಂದಲ ನಿವಾರಣೆಯಾಗದ ಕಾರಣ ವಹಿವಾಟಿನ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಬೆಂಗಳೂರು ಮಾತ್ರವಲ್ಲದೇ ಹಲವು ಜಿಲ್ಲೆಗಳಲ್ಲೂ ಉದ್ಯಮಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಕಾರ್ಯಾಗಾರಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಮುಂದುವರಿಸಲು ಕಾಸಿಯಾ ನಿರ್ಧರಿಸಿದೆ.

“ಜಿಎಸ್‌ಟಿ ವ್ಯವಸ್ಥೆ ಸ್ವಾಗತಾರ್ಹವಾಗಿದ್ದು, ಈ ಬಗ್ಗೆ ಸಣ್ಣ ಕೈಗಾರಿಕಾ ಉದ್ಯಮಿಗಳಲ್ಲಿ ಹೆಚ್ಚಿನ ಅರಿವು ಅಗತ್ಯವಿದೆ. ಜಿಲ್ಲಾ ಮಟ್ಟದ ಕೈಗಾರಿಕೋದ್ಯಮಿಗಳಿಗೂ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಆ ಹಿನ್ನೆಲೆಯಲ್ಲಿ ಕಾಸಿಯಾ ವತಿಯಿಂದ ಬೆಂಗಳೂರು ಮಾತ್ರವಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಾಗಾರಗಳನ್ನು ಆಯೋಜಿಸಿ ಸ್ಪಷ್ಟತೆ ಮೂಡಿಸಿ ಸುಗಮವಾಗಿ ವ್ಯವಹಾರ ನಡೆಸಲು ಅಗತ್ಯ ನೆರವು ನೀಡಲು ಪ್ರಯತ್ನಿಸಲಾಗುವುದು. ಸದ್ಯದಲ್ಲೇ ಜಿಎಸ್‌ಟಿ ಬಗ್ಗೆ ಸ್ಪಷ್ಟತೆ ಮೂಡುವ ನಿರೀಕ್ಷೆ ಇದೆ’ ಎಂದು ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ತಿಳಿಸಿದರು.

ಜಿಎಸ್‌ಟಿಯ ಬಹಳಷ್ಟು ವಿಚಾರಗಳ ಬಗ್ಗೆ ಸಂಘಟಿತ ವಲಯದ ಉದ್ಯಮಿಗಳಲ್ಲೇ ಸ್ಪಷ್ಟತೆಯಿಲ್ಲದಿರುವುದನ್ನು ಗಮನಿಸಿದರೆ ಅಸಂಘಟಿತ ವಲಯದ ಉದ್ಯಮಗಳ ಸ್ಥಿತಿಯೂ ಭಿನ್ನವಾಗಿಲ್ಲದಿರುವುದು ಸ್ಪಷ್ಟವಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ನಾನಾ ಸಂಘಟನೆಗಳು ಕಾರ್ಯಾಗಾರ, ತರಬೇತಿ ಶಿಬಿರ ನಡೆಸುತ್ತಿದ್ದು, ಸ್ಪಷ್ಟತೆ ಮೂಡಿಸಲು ಸಹಕಾರಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next