ಬೆಂಗಳೂರು: ದೇಶದ ಅತೀ ದೊಡ್ಡ ಕೋವಿಡ್ ಆರೈಕೆ ಕೇಂದ್ರ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನಾ ಕೇಂದ್ರದ (ಬಿಐಇಸಿ)ದ ಸಮಸ್ಯೆ ಈಗ ಮತ್ತೂಂದು ತಿರುವು ಪಡೆದುಕೊಂಡಿದೆ. ಇದೀಗ ಈ ಕೇಂದ್ರದ ಮೂಲಸೌಕರ್ಯ ವಿಚಾರದಲ್ಲಿ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವೆ ಕೆಲವು ವಸ್ತುಗಳ ಖರೀದಿಯಲ್ಲಿ ಹಗ್ಗಜಗ್ಗಾಟ ಶುರುವಾಗಿದೆ.
ಈ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಗುತ್ತಿಗೆದಾರ ಪತ್ರ ಬರೆದು ಬಿಬಿಎಂಪಿ ನಿಗದಿಪಡಿಸಿರುವ ಬೆಲೆ ವಸ್ತುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಐಇಸಿಯಲ್ಲಿ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಕೇಂದ್ರದಲ್ಲಿ ಸೋಂಕಿತರ ಮೂಲಸೌಕರ್ಯಕ್ಕೆಂದು ಹಾಸಿಗೆ, ಮಂಚ, ಫ್ಯಾನ್, ಶೌಚಾಲಯ ಮತ್ತು ಸ್ನಾನದ ಕೊಠಡಿ (ತಾತ್ಕಾಲಿಕ)ವ್ಯವಸ್ಥೆಗೆ 26 ವಸ್ತುಗಳನ್ನು ಬಾಡಿಗೆ ಆಧಾರದ ಮೇಲೆ ದಿನಕ್ಕೆ 800 ಬಾಡಿಗೆಗೆ ನೀಡುವಂತೆ ನಾಲ್ವರು ಗುತ್ತಿಗೆದಾರರಿಗೆ ಬಿಬಿಎಂಪಿ ಕಾರ್ಯದೇಶ ನೀಡಿತ್ತು. ಗುತ್ತಿಗೆದಾರರು 6,500 ಹಾಸಿಗೆ ವ್ಯವಸ್ಥೆಗೆ ನಿರ್ಮಾಣ ಶುರು ಮಾಡಿದ್ದರು.
ಈ ಒಪ್ಪಂದದಂತೆ ಬಿಬಿಎಂಪಿ 100 ದಿನಗಳಿಗೆ 10,100 ರೋಗಿಗಳ ಮೂಲಸೌಕರ್ಯಕ್ಕೆ ಬಾಡಿಗೆ ರೂಪದಲ್ಲಿ 240 ಕೋಟಿ ರೂ. ನೀಡಬೇಕಾಗಿತ್ತು. ಇದು ದುಬಾರಿಯಾದ ಹಿನ್ನೆಲೆಯಲ್ಲಿ ಕೆಲವು ವಸ್ತುಗಳನ್ನು ಖರೀದಿ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದರು. ಅದರಂತೆ ಹಾಸಿಗೆ, ಮಂಚ, ಬಕೆಟ್, ನೀರಿನ ಮಗ್, ಬಿಸಿ ನೀರಿನ ಕ್ಯಾನ್ ಹಾಗೂ ಫ್ಯಾನ್ ಸೇರಿ 7,500 ರೂ. ಒಳಗೆ ಖರೀದಿಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಸಮಿತಿಯು ಮಾರುಕಟ್ಟೆ ದರದ ಆಧಾರಿಸಿ ಆರು ವಸ್ತುಗಳಿಗೆ 4,800ರೂ. ಖರೀದಿ ಹಾಗೂ ಉಳಿದ 19 ವಸ್ತುಗಳನ್ನು ದಿನಕ್ಕೆ 200 ರೂ. ಬಾಡಿಗೆ ಆದೇಶಿಸಿದ್ದರು. ಆದರೆ, ಈ ದರಕ್ಕೆ ಹಾಸಿಗೆ, ಮಂಚ ಸೇರಿ ಆರು ವಸ್ತುಗಳನ್ನು ಸರಬರಾಜು ಮಾಡುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಅವರು ಹೇಳಿದಂತೆ 7,500 ರೂ. ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಆರೈಕೆ ಕೇಂದ್ರ ಶೀಘ್ರ ಸೇವೆಗೆ ಮುಕ್ತ : ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ 5 ಸಾವಿರ ಸೋಂಕಿತರು (ಸೋಂಕಿನ ತೀವ್ರತೆ ಇಲ್ಲದವರಿಗೆ) ಹಾಸಿಗೆಗಳು ಲಭ್ಯವಿದ್ದು, ಸಾವಿರ ಹಾಸಿಗೆಗಳನ್ನು ರೋಗಿಗಳ ಆರೈಕೆಗೆ ಶೀಘ್ರ ಮುಕ್ತಗೊಳಿಸುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು. ಬಿಐಇಸಿಗೆ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಐಇಸಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು 6500 ಹಾಸಿಗೆ ಸೌಲಭ್ಯವಿದೆ. ಇದರಲ್ಲಿ ಐದು ಸಾವಿರ ಹಾಸಿಗೆ ಸಿದ್ಧವಾಗಿವೆ. ಇನ್ನು ನಗರದ ವಿವಿಧ
ಪ್ರದೇಶದಲ್ಲಿ ಎಂಟು ಆರೈಕೆ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, 2,624 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಲಯ ಮತ್ತು ವಾರ್ಡ್ ವಾರು ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸುತ್ತೇವೆ ಎಂದರು.
ಮುಖ್ಯಮಂತ್ರಿ ಅವರು ರಚನೆ ಮಾಡಿದ ಅಧಿಕಾರಿಗಳ ಸಮಿತಿ ಖರೀದಿ ಮಾಡುವ ವಸ್ತುಗಳ ಬೆಲೆಯ ಬಗ್ಗೆ ಈಗಾಗಲೇ ಮಾರುಕಟ್ಟೆಯಲ್ಲಿ ಸರ್ವೇ ಮಾಡಿ 4,800 ರೂ. ಎಂದು ದರ ನಿಗದಿ ಮಾಡಿಯಾಗಿದೆ. ಸಮಿತಿ ಆದೇಶದಂತೆ ಬಿಬಿಎಂಪಿ ಹಣ ಪಾವತಿ ಮಾಡಲಿದೆ. ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ.
– ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ