“ನೀನೇನಾ ಪುಷ್ಪ?’ ಎಂದು ಸ್ವಲ್ಪ ಜೋರಿನ ದನಿಯಲ್ಲಿ ಕೇಳಿದರು. “ಹೌದು ಮೇಡಂ’ ಎಂದೆ ನಡುಗುತ್ತಾ. “ಒಬ್ಬ ಹುಡುಗನಿಂದ ನಿನಗೊಂದು ಪತ್ರ ಬಂದಿದೆ. ಇಷ್ಟು ಸಣ್ಣ ವಯಸ್ಸಿಗೇ ಇದೆಲ್ಲಾ ಬೇಕಾ? ಅದೂ ಅವನು ಶಾಲೆಯ ವಿಳಾಸಕ್ಕೇ ಪತ್ರ ಬರೆದಿದ್ದಾನೆ. ಇದು ಸರಿಯಾ?’ ಅಂತ ಸೀರಿಯಸ್ ಆಗಿ ವಿಚಾರಿಸತೊಡಗಿದರು.
ಇದು ಸುಮಾರು ಐವತ್ತು ವರ್ಷಗಳಷ್ಟು ಹಿಂದಿನ ಘಟನೆ. ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದು ಬಾಲಕಿಯರ ಪ್ರೌಢ ಶಾಲೆ. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು, ಹುಡುಗರ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಎಲ್ಲಾ ಶಾಲೆಗಳಲ್ಲೂ ಶಿಸ್ತು ಕಟ್ಟುನಿಟ್ಟಾಗಿದ್ದುದಲ್ಲದೆ ಅಧ್ಯಾಪಕರನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು.
ಎಲ್ಲಾ ವಿದ್ಯಾರ್ಥಿನಿಯರೂ ಅವರಾಯಿತು, ಅವರ ಪಾಠಪ್ರವಚನವಾಯಿತು ಎಂಬಂತಿದ್ದರು. ಬೇರಾವುದೇ ವಿಷಯಗಳೂ ನಮ್ಮನ್ನು ತಾಕುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ, ಮೂರನೆಯ ಪಿರಿಯಡ್ ಇರಬಹುದು. ಶಾಲೆಯ ಆಯಾ ನಮ್ಮ ತರಗತಿಗೆ ಬಂದು ನನ್ನನ್ನು ಮುಖ್ಯೋಪಾಧ್ಯಾಯಿನಿ ಕರೆಯುತ್ತಿದ್ದಾರೆಂದು ಹೇಳಿದಳು. ಅದನ್ನು ಕೇಳಿಯೇ ನನ್ನ ಜಂಘಾಬಲ ಉಡುಗಿ ಹೋಯ್ತು. ಏನು ವಿಷಯವೆಂದು ಆಯಾಳನ್ನು ಕೇಳಿದ್ದಕ್ಕೆ, ಯಾವುದೋ ಒಂದು ಪತ್ರವನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆಂದು ಹೇಳಿದಳು. ನಾನು ಹೆದರಿಕೆಯಿಂದ ಕುಸಿದು ಹೋಗಿದ್ದೆ.
ಮುಖ್ಯೋಪಾಧ್ಯಾಯಿನಿಯ ಹೆಸರು ರುಕ್ಮಿಣಿ. ಅವರು ಬಹಳ ಸ್ಟ್ರಿಕ್ಟ್. ಹುಡುಗಿಯರ ಹೆಸರಿಗೆ ಯಾವುದೇ ಪತ್ರ ಬಂದರೂ ಅದನ್ನು ಒಡೆದು ಓದುತ್ತಿದ್ದರು. ನನ್ನನ್ನು ನೋಡಿದಾಕ್ಷಣ, “ನೀನೇನಾ ಪುಷ್ಪ?’ ಎಂದು ಸ್ವಲ್ಪ ಜೋರಿನ ದನಿಯಲ್ಲಿ ಕೇಳಿದರು. “ಹೌದು ಮೇಡಂ’ ಎಂದೆ ನಡುಗುತ್ತಾ. “ಒಬ್ಬ ಹುಡುಗನಿಂದ ನಿನಗೊಂದು ಪತ್ರ ಬಂದಿದೆ. ಇಷ್ಟು ಸಣ್ಣ ವಯಸ್ಸಿಗೇ ಇದೆಲ್ಲಾ ಬೇಕಾ? ಅದೂ ಅವನು ಶಾಲೆಯ ವಿಳಾಸಕ್ಕೇ ಪತ್ರ ಬರೆದಿದ್ದಾನೆ. ಇದು ಸರಿಯಾ?’ ಅಂತ ಸೀರಿಯಸ್ ಆಗಿ ವಿಚಾರಿಸತೊಡಗಿದರು. ವಿಷಯ ಕೇಳಿದಾಕ್ಷಣ ನನಗೆ ಶಾಕ್ ಆಯ್ತು . ಏಕೆಂದರೆ ಪ್ರೀತಿ ಪ್ರೇಮ ಇತ್ಯಾದಿಯ ಹತ್ತಿರವೂ ಸುಳಿಯದಷ್ಟು ಮುಗ್ಧ ವಯಸ್ಸು ಅದು. ಅಂಥಾದ್ದರಲ್ಲಿ ನನಗೆ ಪ್ರೇಮಪತ್ರ ಅಂದರೆ! ಆಗಲೇ ನನ್ನ ಕಣ್ಣಲ್ಲಿ ಗಂಗಾ ಯಮುನಾ ಹರಿಯಲು ಶುರುವಾಗಿತ್ತು. ನಾನು ಧೈರ್ಯ ಮಾಡಿ ಕೇಳಿಯೇ ಬಿಟ್ಟೆ-“ಮೇಡಂ, ಆ ಹುಡುಗನ ಹೆಸರೇನು?’ ಆಗ ಮೇಡಂ ಹುಡುಗನ ಹೆಸರು ಹೇಳಿದರು. ಅಂಥ ಹೆಸರಿನವರ್ಯಾರೂ ನನಗೆ ಪರಿಚಯವಿರಲಿಲ್ಲ. “ಮೇಡಂ, ಆ ಹೆಸರಿನವರ್ಯಾರೂ ನನಗೆ ಗೊತ್ತಿಲ್ಲ. ಪತ್ರ ಕೊಡಿ ನೋಡುತ್ತೇನೆ’ ಎಂದೆ. ಅವರು ಪತ್ರ ಕೈಗೆ ಕೊಟ್ಟರು. ನೋಡಿದಾಗ ಅದು ಪುಷ್ಪಾಮಣಿ ಎನ್ನುವವಳ ಹೆಸರಿಗೆ ಬಂದ ಪತ್ರವಾಗಿತ್ತು. ಅವಳು ನನ್ನ ತರಗತಿಯವಳೇ ಆಗಿದ್ದಳು. “ಮೇಡಂ, ಇದು ನನಗೆ ಬಂದಿದ್ದಲ್ಲ. ಇದು ನಮ್ಮ ಕ್ಲಾಸಿನ ಪುಷ್ಪಾಮಣಿಗೆ ಬಂದದ್ದು’ ಎಂದೆ ನಿರಾಳದ ನಿಟ್ಟುಸಿರುಬಿಡುತ್ತಾ. ಅವರಿಗೂ ಗೊಂದಲವಾಗಿ, “ಹಾಗಾದರೆ ಅವಳನ್ನು ಕಳುಹಿಸು’ ಎಂದರು. ಅಳುಕುತ್ತಳುಕುತ್ತಾ ಸ್ಟಾಫ್ರೂಮ್‌ಗೆ ಹೋದವಳು, ನಗುತ್ತಾ ಬಂದು ಪುಷ್ಪಾಮಣಿಯನ್ನು ಕಳುಹಿಸಿದ್ದೆ. ಅವಳು ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ.
ಅವಳಿಗೆ ಇಷ್ಟೊತ್ತಿಗೆ ಸರಿಯಾಗಿಯೇ ಸಹಸ್ರ ನಾಮಾರ್ಚನೆ ಆಗಿರಬಹುದು ಎಂದು ಆಲೋಚಿಸುತ್ತಾ, ಅವಳಿಗಾಗಿ ಕಾಯುತ್ತಾ ಇದ್ದೆ. ಆಗಲೇ ತರಗತಿಯವರಿಗೆಲ್ಲ ವಿಷಯ ಗೊತ್ತಾಗಿದ್ದುದರಿಂದ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಅಳುತ್ತಾ ಬಂದ ಅವಳಿಂದ ಎಲ್ಲರಿಗೂ ಏನು ನಡೆಯಿತೆಂದು ತಿಳಿಯಿತು. ಪುಷ್ಪಾಮಣಿಗೆ ಮಾವನ ಮಗನ ಜೊತೆ ಮದುವೆ ನಿಶ್ಚಯವಾಗಿತ್ತು. ಮನೆಗೆ ನೇರವಾಗಿ ಪತ್ರ ಬರೆದರೆ, ಎಲ್ಲರಿಗೂ ಗೊತ್ತಾಗಬಹುದೆಂದು ಆ ಹುಡುಗ ಶಾಲೆಯ ವಿಳಾಸಕ್ಕೆ ಪತ್ರ ಬರೆದಿದ್ದ. ಅಂತೂ ನನ್ನ ಮೇಲೆ ಬಂದಿದ್ದ ಆಪಾದನೆ ಮೋಡದಂತೆ ಕರಗಿ ಹೋಗಿತ್ತು. ಪುಷ್ಪಾಮಣಿಯು ಪುಷ್ಪಳಾಗಿ ಒಂದು ಕ್ಷಣ ನನ್ನನ್ನು ವಿಚಲಿತಗೊಳಿಸಿಬಿಟ್ಟಿದ್ದಳು.
ಪುಷ್ಪಾ ಎನ್.ಕೆ. ರಾವ್