ಧಾರವಾಡ: ಕಳೆದ ವರ್ಷದ ಅತಿವೃಷ್ಟಿ, ಅದರ ಹಿಂದಿನ ವರ್ಷಗಳಲ್ಲಿನ ಬರಗಾಲದ ಹೊಡೆತಕ್ಕೆ ನಲುಗಿರುವ ಜಿಲ್ಲೆಯ ರೈತರು ಇದೀಗ ತಾವು ಬೆಳೆದ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೂ ಪೇಚಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೋವಿಡ್ ಹೊಡೆತ, ಇನ್ನೊಂದೆಡೆ ಅಧಿಕಾರಿಗಳ ನಿಷ್ಕಾಳಜಿಯಿಂದ ಬೆಳೆದರ್ಶಕ ಆ್ಯಪ್ ಮಾಡಿದ ಪ್ರಮಾದಕ್ಕೆ ರೈತರು ಸುಖಾ ಸುಮ್ಮನೆ ಅಧಿಕಾರಿಗಳ ಹಿಂದೆ ಅಲೆದಾಡುವ ಸ್ಥಿತಿ ಬಂದಿದೆ.
ಹೌದು.. ರೈತರು ತಮ್ಮ ಹೊಲಗಳಲ್ಲಿ ಏನು ಬೆಳೆ ಬೆಳೆದಿದ್ದಾರೆ ಎನ್ನುವುದನ್ನು ಸಾಕ್ಷಿ ಸಮೇತ ದೃಢೀಕರಿಸಲು ಬೆಳೆ ದರ್ಶಕ ಆ್ಯಪ್ ಸಹಾಯಕವಾಗಿದೆ. ಆದರೆ ತಲಾಟಿ ಮತ್ತು ಗ್ರಾಮಗಳಲ್ಲಿನ ಪಂಚಾಯತ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಈ ಬೆಳೆದರ್ಶಕ ಆ್ಯಪ್‌ನಲ್ಲಿ ರೈತರು ಬೆಳೆದ ಬೆಳೆಗಳೇ ಇಲ್ಲವಾಗಿ, ಬೇರೆ ಇನ್ನಾವುದೋ ಬೆಳೆಗಳು ನಮೂದಾಗಿ ಅನ್ನದಾತರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಬೆಳೆ ವಿಮೆ ಮತ್ತು ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಗೆ ಸಹಾಯಕವಾಗುವ ಮತ್ತು ಅಧಿಕೃತ ದಾಖಲೆಯಾಗಿ ಪರಿಗಣಿಸುವ ಬೆಳೆದರ್ಶಕ ಆ್ಯಪ್‌ನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಎಸಗಿರುವ ಪ್ರಮಾದಗಳಿಂದ ಇದೀಗ ಕಡಲೆ, ಗೋವಿನಜೋಳ, ಭತ್ತ, ಹೆಸರು, ಮೆಣಸಿನಕಾಯಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡುವುದು ರೈತರಿಂದ ಸಾಧ್ಯವಾಗುತ್ತಿಲ್ಲ.
ಆಗಿರುವ ಪ್ರಮಾದವೇನು?: ಒಂದೆಡೆ ತಿಂಗಳು ಗಟ್ಟಲೇ ಹೋರಾಟ ಮಾಡಿ ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆದುಕೊಳ್ಳಲು ರೈತರು ಯಶಸ್ವಿಯಾಗಿದ್ದಾರೆ. ಸರ್ಕಾರ ಇನ್ನೇನು ಬೆಳೆ ಖರೀದಿ ಮಾಡುತ್ತದೆ ಎನ್ನುವಾಗ ಬೆಳೆದರ್ಶಕ ಆ್ಯಪ್‌ನಲ್ಲಿನ ಪ್ರಮಾದ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರ ಯಾವ ಬೆಳೆ ಖರೀದಿ ಮಾಡುತ್ತದೆಯೋ ಆ ರೈತರು ತಮ್ಮ ಹೊಲದ ಸರ್ವೇ ನಂಬರ್ ಹೊಂದಿರುವ ಪಹಣಿ ಪತ್ರಗಳ ಸಮೇತ ಅಗತ್ಯ ದಾಖಲೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಪಹಣಿ ಪತ್ರದಲ್ಲಿ ನಮೂದಾಗಿರುವ ಬೆಳೆ ಮಾತ್ರ ಖರೀದಿಸಲಾಗುತ್ತದೆ.
ಉದಾಹರಣೆಗೆ ಕಡಲೆಯನ್ನು ರೈತನೊಬ್ಬ ಬೆಂಬಲ ಬೆಲೆಗೆ ಮಾರಾಟ ಮಾಡಬೇಕಾದರೆ ಆತನ ಹೆಸರಿನ ಹೊಲದ ಪಹಣಿಪತ್ರದಲ್ಲಿ ಈ ವರ್ಷದ ಬೆಳೆ ಕಡಲೆ ಎಂದು ನಮೂದಾಗಿರಬೇಕು. ಅಲ್ಲಿ ಬೇರೆ ಬೆಳೆ ನಮೂದಾಗಿದ್ದರೆ ಆತನಿಂದ ಕಡಲೇ ಖರೀದಿ ಮಾಡುವುದಿಲ್ಲ. ಆದರೆ ಅಧಿಕಾರಿಗಳು ರೈತರ ಹೊಲಗಳಲ್ಲಿನ ಬೆಳೆಯನ್ನು ಮನಬಂದಂತೆ ನಮೂದಿಸಿದ್ದು, ಮಿಶ್ರಬೆಳೆ ಬೆಳೆದ ವಿವರಗಳೇ ಇಲ್ಲದಂತಾಗಿವೆ. ರೈತನೊಬ್ಬ ತನ್ನ ಹತ್ತು ಎಕರೆ ಹೊಲದಲ್ಲಿ ನಾಲ್ಕು ಎಕರೆ ಜೋಳ, ನಾಲ್ಕು ಎಕರೆ ಕಡಲೆ, ಎರಡು ಎಕರೆ ಹೆಸರು ಬೆಳೆದಿದ್ದರೆ, ಈ ಮೂರು ಬೆಳೆ ಪಹಣಿ ಪತ್ರದಲ್ಲಿ ನಮೂದಾಗಬೇಕು. ಆದರೆ ಬೆಳೆದರ್ಶಕ ಆ್ಯಪ್ ಇದೇ ಮೊದಲ ಬಾರಿಗೆ ಜಾರಿಯಾಗಿದ್ದರಿಂದ ಈ ಆವಾಂತರ ನಡೆದಿದೆ.
ಇನ್ನು ಬಂದಿಲ್ಲ ಬೆಳೆವಿಮೆ: 2018ರ ಮುಂಗಾರಿಯಲ್ಲಿ ಭತ್ತದ ಬೆಳೆವಿಮೆಯೂ ಇದೇ ಕಾರಣಕ್ಕಾಗಿ ಇನ್ನು ಜಿಲ್ಲೆಯ 6500ಕ್ಕೂ ಹೆಚ್ಚು ರೈತರಿಗೆ ತಲುಪಿಯೇ ಇಲ್ಲ. ರೈತರು ತಮ್ಮ ಹೊಲಗಳಲ್ಲಿ ಭತ್ತ, ಕಬ್ಬು, ಹತ್ತಿ ಎಲ್ಲವನ್ನು ಬಿತ್ತನೆ ಮಾಡಿರುತ್ತಾರೆ. ಆದರೆ ಬೆಳೆ ಸಮೀಕ್ಷೆ ಮಾಡುವಾಗ ಖಾಸಗಿ ಕಂಪನಿಯವರಿಗೆ ಸಮೀಕ್ಷೆ ಜವಾಬ್ದಾರಿ ವಹಿಸುವ ಸರ್ಕಾರದ ಕ್ರಮದಿಂದಾಗಿ ತಪ್ಪು ಬೆಳೆಗಳು ನಮೂದಾಗಿವೆ. ಈ ರೀತಿಯಾಗಿರುವ ಎಲ್ಲ ರೈತರು ಆಗಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಬೆಳೆವಿಮೆ ಆದಷ್ಟು ಬೇಗನೆ ಕೊಡಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಇದೇ ಮೊದಲ ಬಾರಿ ಬೆಳೆದರ್ಶಕ ವ್ಯವಸ್ಥೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಹೆಚ್ಚು ರೈತರಿಗೆ ಈ ಕುರಿತು ಗೊತ್ತಿಲ್ಲ. ಕೆಲವು ಪ್ರಮಾದಗಳಾಗಿದ್ದು, ಸರಿಪಡಿಸಲಾಗುತ್ತಿದೆ. –
ರಾಜಶೇಖರ, ಜಂಟಿ ನಿರ್ದೇಶಕ, ಕೃಷಿಇಲಾಖೆ, ಧಾರವಾಡ
ಜಿಲ್ಲೆಯ ರೈತರಿಗೆ ಬೆಳೆದರ್ಶಕ ಆ್ಯಪ್‌ನಿಂದ ಆಗಿರುವ ತೊಂದರೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಬೆಳೆ ದರ್ಶಕ ವ್ಯವಸ್ಥೆ ಸರಿಪಡಿಸಿ ಎಂದು ಕಳೆದ ಫೆಬ್ರವರಿ ತಿಂಗಳಿನಲ್ಲಿಯೇ ಮನವಿ ಮಾಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಮೊಬೈಲ್ ಬಳಕೆ ಎಲ್ಲ ರೈತರಿಂದಲೂ ಸಾಧ್ಯವಿಲ್ಲ. ಕೂಡಲೇ ಸರ್ಕಾರ ಈ ಪ್ರಮಾದ ಸರಿಪಡಿಸಬೇಕು.
– ಶ್ರೀಶೈಲಗೌಡ ಕಮತರ, ರೈತ ಮುಖಂಡ
-ಬಸವರಾಜ ಹೊಂಗಲ್