ಕೊಪ್ಪಳ: ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಮೊದಲ ಸೆಮ್‌ನ ಪರೀಕ್ಷೆ ಗುರುವಾರ ಆರಂಭವಾಗಿದ್ದು, ಹಾಲ್ ಟಿಕೆಟ್ ಸಂಖ್ಯೆಯ ಗೊಂದಲದಿಂದಾಗಿ ನೂರಾರು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳಲು ಪರದಾಡಿದರು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಎನ್‌ಇಪಿ ಜಾರಿ ಬಳಿಕ ಮೊದಲ ಪರೀಕ್ಷೆ ಗುರುವಾರದಿಂದ ಆರಂಭವಾಗಿದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ಸೆಮ್ ಕನ್ನಡ ವಿಷಯಕ್ಕೆ ಮಧ್ಯಾಹ್ನ 2ಕ್ಕೆ ಪರೀಕ್ಷೆ ಆರಂಭವಾಗಬೇಕಿತ್ತು. ಆದರೆ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ ಪ್ರವೇಶಾತಿ ಪತ್ರದಲ್ಲಿನ ಸಂಖ್ಯೆಗೂ ಹಾಗೂ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾದ ಪ್ರವೇಶಾತಿ ಪತ್ರದ ಸಂಖ್ಯೆಗೂ ತಾಳೆಯಾಗುತ್ತಿರಲಿಲ್ಲ. ಇದರಿಂದ ನೂರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು.
ಕಾಲೇಜಿನ ನೋಟಿಸ್ ಬೋರ್ಡ್ ಮುಂದೆ ಮುಗಿ ಬಿದ್ದು ನೋಡುತ್ತಿದ್ದರು. ಯಾವ ವಿದ್ಯಾರ್ಥಿಗಳಿಗೂ ಸರಿಯಾದ ಪ್ರವೇಶಾತಿ ನಂಬರ್ ಸಿಗುತ್ತಿರಲಿಲ್ಲ. ಪರೀಕ್ಷಾ ಕೊಠಡಿ ಏಲ್ಲಿದೆ? ಯಾವ ಬ್ಲಾಕ್‌ನಲ್ಲಿದೆ? ಎಷ್ಟನೇ ಕೊಠಡಿಯಲ್ಲಿದೆ? ಎನ್ನುವ ಗೊಂದಲಕ್ಕೆ ಒಳಗಾಗಿದ್ದರು. ಮಧ್ಯಾಹ್ನ 3 ಗಂಟೆಯಾದರೂ ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಣೆಯಾಗಲಿಲ್ಲ. ಹೀಗಾಗಿ ನಾವು ಪರೀಕ್ಷೆಯಿಂದ ವಂಚಿತರಾಗಲಿದ್ದೇವೆ ಎನ್ನುವ ಆತಂಕದಲ್ಲಿದ್ದರು. ಕೊನೆಗೂ ಮಧ್ಯಾಹ್ನ 3 ಗಂಟೆಗೆ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ವಿವಿ ಎಡವಟ್ಟಿಗೆ ನೂರಾರು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕಾಲೇಜಿನಲ್ಲಿ 1750 ವಿದ್ಯಾರ್ಥಿಗಳು ಪರೀಕ್ಷೆಗೆ ಪ್ರವೇಶಾತಿ ಪಡೆದುಕೊಂಡಿದ್ದು, ಇವರಲ್ಲಿ 100 ವಿದ್ಯಾರ್ಥಿಗಳು ತಮ್ಮ ಲಾಗಿನ್‌ನಲ್ಲಿ ಕೆಲವೊಂದು ಅಪ್ಡೆàಟ್ ಮಾಡಿಲ್ಲ. ಹೀಗಾಗಿ ಅವರ ಪ್ರವೇಶಾತಿ ಪತ್ರ ಬಂದಿಲ್ಲ. ಆದರೆ ವಿವಿಯು ಅಂತಹ ವಿದ್ಯಾರ್ಥಿಗಳಿಗೆ ಮ್ಯಾನುವಲ್ ಪ್ರವೇಶಾತಿ ಪತ್ರ ಕೊಡಲು ಅವಕಾಶ ನೀಡಿದ್ದು, ಆ ಎಲ್ಲ ವಿದ್ಯಾರ್ಥಿಗಳಿಗೂ ನಾವು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದೇವೆ. ಎನ್‌ಇಪಿ ಜಾರಿ ಬಳಿಕ ಇದು ಮೊದಲ ಪರೀಕ್ಷೆಯಾದ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲವಾಯಿತು. ಬಳಿಕ ಎಲ್ಲವನ್ನೂ ಸರಿಮಾಡುವ ಪ್ರಯತ್ನ ಮಾಡಿದ್ದೇವೆ.
-ಮಾರುತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ